ಹಂಪೆ

ಕರ್ನಾಟಕ ದರ್ಶನ

ಹಂಪಿ ಎಂದಾಕ್ಷಣ ನೀಮಗೆ ಅತ್ಯಂತ ಸುಂದರವಾದ ವಾಸ್ತುಶಿಲ್ಪವುಳ್ಳ, ವಿಜಯ ನಗರದ ಮನಮೋಹಕವಾದ,ಆದರೆ ಇಂದು ಅವಶೇಷಗಳ ಮಧ್ಯ ಸಿಲುಕಿರುವ ನಗರ ಎನಿಸುವದು ಸಹಜ ಹಾಗು ಅಷ್ಟೇ ಸತ್ಯ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದು,ಹೊಯ್ಸಳರ ಸಾಂಪ್ರದಾಯಿಕ ಶೈಲಿಯ ವಾಸ್ತುಶೀಲ್ಪವನ್ನು ವೈಭವತೆಯಿಂದ ಪ್ರದರ್ಶಿಸಿದ ವಿಜಯನಗರ ಅಥವಾ ಹಂಪಿಯು ಇಂದು ಕೇವಲ ಕಲ್ಲಿನಲ್ಲಿ ಮುಚ್ಚಿಹೊದ ಒಂದು ಅದ್ಭುತ. ಹಂಪೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಈ ಊರು. 1336 ರಿಂದ 1565 ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪೆಯ ಮೊದಲನೆ ಹೆಸರು ‘ಪಂಪಾ’ ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು ‘ವಿಜಯನಗರ’ ಮತ್ತು ‘ವಿರುಪಾಕ್ಷಪುರ’ ಎಂದು ಕರೆಯಲ್ಪಟ್ಟಿತು. ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.

ಹಂಪಿಯ ಕೆಲವು ತ್ವರಿತ ಸತ್ಯಗಳು

ಹಂಪಿಯು ಪ್ರಾಚೀನ ಪ್ರದೇಶವಾಗಿದ್ದು, ರಾಮಾಯಣದಲ್ಲೂ ಕೂಡ ಇದರ ಬಗ್ಗೆ ಉಲ್ಲೇಖವಿದ್ದು, ಇತೀಹಾಸಕಾರರು ಇದನ್ನು ಕಿಷ್ಕೀಂದಾ ಎಂದು ಗುರುತಿಸಿದ್ದಾರೆ. ಆದರೆ ನೀಜವಾಗಿಯೂ, ಹಂಪಿಯು 13 ರಿಂದ 16 ನೇ ಶತಮಾನಗಳ ಮಧ್ಯೆ ವಿಜಯನಗರ ಸಾಮ್ರಾಟರ ಅಡಿಯಲ್ಲಿ ರಾಜಧಾನಿಯಾಗಿ ಉನ್ನತವಾದ ಪ್ರಗತಿಯನ್ನು ಹೊಂದಿತು. ಹಂಪಿಯು ಕರ್ನಾಟಕದ ಉತ್ತರ ಭಾಗದಲ್ಲಿದ್ದು, ಬೆಂಗಳೂರಿನಿಂದ 350 ಕಿ. ಮೀ ದೂರದಲ್ಲಿದೆ. ಬೆಂಗಳೂರಿನಿಂದ, ಹಂಪಿಯನ್ನು ಕೆಲವೇ ಘಂಟೆಗಳಲ್ಲಿ ಸರಳವಾಗಿ ಹೆದ್ದಾರಿಯ ಮೂಲಕ ಮುಟ್ಟಬಹುದಾಗಿದೆ. ಹಂಪಿಯು ಯುನೆಸ್ಕೊದಿಂದ ವರ್ಲ್ದ್ ಹೆರಿಟೆಜ್ ಸೈಟ್ ಎಂಬ ಮನ್ನಣೆಯನ್ನು ಪಡೆದಿದ್ದು, ಪ್ರತಿ ವರ್ಷವೂ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತದೆ. ಹಂಪಿಯ ವೈಭವವನ್ನು ಪೂರ್ತಿಯಾಗಿ ಸವಿಯಲು ಇಚ್ಛೆಯಾದಲ್ಲಿ, ಬೇರೆ ಪ್ರವಾಸಿಗರ ಹಾಗೆ, ನೀವು ಕೂಡ ಒಂದು ಸೈಕಲ್ ನ್ನು ಬಾಡಿಗೆಗೆ ಪಡೆದುಕೊಂಡು ಮನಸಾರೆ ಸುತ್ತಬಹುದು.

ಹಂಪೆ ಹಾಗು ಸುತ್ತಮುತ್ತಲಿರುವ ಕೆಲವು ಮುಖ್ಯ ಸ್ಮಾರಕಗಳು

ಮೊದಲಿಗೆ ಹಂಪಿಗೆ ಬಂದಾಗ ಇಲ್ಲಿನ ಅನೇಕ ಸ್ಮಾರಕಗಳನ್ನು ನೋಡಿ ಗಲಿಬಿಲಿಯುಂಟಾಗುವುದು ಸಹಜ. ಆದ್ದರಿಂದ ಇಲ್ಲಿನ ಸ್ಮಾರಕಗಳನ್ನು ಮತ್ತು ಇಲ್ಲಿರುವ ದೇವಸ್ಥಾನಗಳನ್ನು ನೋಡಲು ಸುಲಭವಾಗುವಂತೆ ಹಲವು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅವೆಂದರೆ-

 • ಕೇಂದ್ರವಾದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ.
 • ನಡೆದು ನೋಡಬಹುದಾದ ದಾರಿ.
 • ವಾಹನಗಳಲ್ಲಿ ಸಂಚರಿಸಿ ನೋಡಬಹುದಾದ ದಾರಿ.
 • ಸೂರ್ಯಾಸ್ತದ ಸ್ಥಳಗಳು.
 • ಅಚ್ಯುತರಾಯ ದೇಗುಲ
 • ಆನೆಗೊಂದಿ
 • ಅಂಜನಾದ್ರಿ ಪರ್ವತ
 • ವಿರೂಪಾಕ್ಷೇಶ್ವರ ದೇವಾಲಯ
 • ತುಂಗಭದ್ರ ನದಿ
 • ಪುರಂದರ ಮಂಟಪ
 • ವಿಜಯವಿಠ್ಠಲ ದೇಗುಲ
 • ಕಲ್ಲಿನ ತೇರು
 • ಉಗ್ರ ನರಸಿಂಹ
 • ಕಡಲೆಕಾಳು ಗಣಪತಿ
 • ಸಾಸಿವೆಕಾಳು ಗಣಪತಿ
 • ರಾಣಿ ಸ್ನಾನಗೃಹ
 • ಹಂಪೆ ಬಜಾರ್
 • ಹೇಮಕೂಟ

ಬಡವಿ ಲಿಂಗ 9 ಅಡಿಯ ದೇವಸ್ಥಾನವಾಗಿದ್ದು, ಲಕ್ಷ್ಮಿನರಸಿಂಹ ದೇವಸ್ಥಾನದ ಸಮೀಪವೆ ಕಾಣಸಿಗುತ್ತದೆ. ಇದರ ವಿಶಿಷ್ಟತೆಯೆಂದರೆ, ಇದು ಒಂದು ಪ್ರಾಚೀನ ಕಾಲುವೆಯ ಮುಖಾಂತರ ಹರಿದು ಬರುವ ನೀರಿನಿಂದ ಸದಾಕಾಲ ಆವೃತವಾಗಿರುತ್ತದೆ. ಈ ಲಿಂಗದಲ್ಲಿ ಮೂರು ಕಣ್ಣುಗಳನ್ನು ಕೆತ್ತಲಾಗಿದ್ದು, ಭಗವಾನ ಶಿವನ ಮೂರು ನೇತ್ರಗಳನ್ನು ಪ್ರತಿನಿಧಿಸುತ್ತದೆ. ಇದು ಕೂಡ ಭೇಟಿ ಕೊಡಬಹುದಾದಂತಹ ಸ್ಥಳವಾಗಿದೆ. ಸ್ಥಳೀಯರ ನಂಬಿಕೆ ಪ್ರಕಾರ, ಹಂಪಿ ಎಂಬ ಬಡ ಬುಡಕಟ್ಟು ಜನಾಂಗದವನೊಬ್ಬ ತನ್ನ ಆಸೆಗಳನ್ನು ಈಡೇರಿಸಿದರೆ ಒಂದು ಶಿವಲಿಂಗವನ್ನು ಕಟ್ಟುತ್ತೆನೆಂದು ಮಾತು ಕೊಡುತ್ತಾನೆ. ಇದನ್ನರಿತ ಪರಮೇಶ್ವರನು ಅವನ ಆಸೆಗಳನ್ನು ಈಡೇರಿಸಲು ನಿರ್ಧರಿಸಿದ. ತದನಂತರ ಆ ಭಕ್ತನು ಈ ಬಡವಲಿಂಗವನ್ನು ನಿರ್ಮಿಸಿ ಈಶ್ವರನಿಗೆ ಅರ್ಪಿಸಿದ. ಇನ್ನೊಂದು ದಂತಕಥೆಯ ಪ್ರಕಾರ,ಈ ಲಿಂಗವು ಒಬ್ಬ ರೈತ ಮಹಿಳೆಯಿಂದ ನಿರ್ಮಿತವಾಗಿದ್ದು, ಅದಕ್ಕವಳು ಬಡವಿಲಿಂಗ ಎಂದು ನಾಮಕರಣ ಮಾಡಿದ್ದಳು ಎಂದು.

ಸಾಸುವೆಕಾಳು ಗಣೇಶ ಹೇಮಕೂಟ ಬೆಟ್ಟದ ಕೆಳಗಿರುವ ಸಾಸಿವೆಕಾಳು ಗಣೇಶ ಗುಡಿಗೆ ಭೇಟಿ ನೀಡಲೇ ಬೇಕು. ಸಾಸಿವೆ ಕಾಳುಗಳನ್ನು ನೆನಪಿಗೆ ತರುವಂತಹ, ಇಲ್ಲಿರುವ ಜನಪ್ರೀಯ ಗಣಪತಿ ವಿಗ್ರಹವು ೮ ಅಡಿ ಉದ್ದವಾಗಿದೆ. ಆದ್ದರಿಂದ ಭಕ್ತ ಸಮೂಹದಲ್ಲಿ, ಇದು ಸಾಸಿವೆಕಾಳು ಗಣೇಶನೆಂಬ ಹೆಸರಿನಿಂದಲೂ ಚಿರಪರಿಚಿತವಾಗಿದೆ. ಪುರಾಣದ ಪ್ರಕಾರ, ಒಮ್ಮೆ ಭಗವಾನ ಗಣೇಶನು, ಮಿತಿ ಮಿರಿ ತಿಂದಿದ್ದರ ಪರಿಣಾಮ ಹೊಟ್ಟೆ ಒಡೆಯುವಂತಾಗಿ, ಅದನ್ನು ತಡೆಯಲು ಸರ್ಪವನ್ನು ಹೊಟ್ಟೆಗೆ ಅಡ್ಡಲಾಗಿ ಸುತ್ತಿಕೊಂಡನೆಂಬುದು ಪ್ರತೀತಿ. ವಿಗ್ರಹವು ಒಂದೆ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು, ಬಲಗೈಯಲ್ಲಿ ಮುರಿದ ಆನೆಯ ದಂತ ಮತ್ತು ಅಂಕುಶವನ್ನು ಕಾಣಬಹುದು.ಮೊದಲನೆ ಎಡಗೈ ವಂಕಿಯಾಕರದ ಪಾಶವನ್ನು ಹೊಂದಿದ್ದು, ಎರಡನೆ ಎಡಗೈಯ ಮತ್ತು ಸೊಂಡಿಲು ಕಲ್ಲಿನಿಂದ ಬೇರ್ಪಡಿಸಿ ಕೆತ್ತಲಾಗಿದೆ. ಸಾಸಿವೆ ಕಾಳು ಗಣೇಶ ಗುಡಿಯನ್ನು ತಲುಪಿದಾಗ, ವಿಗ್ರಹವು ವಿಶಾಲವಾದ ಆವರಣವನ್ನು ಹೊಂದಿರುವದು ಕಾಣಬಹುದು. ಅಲ್ಲಿ ಕೆತ್ತಲಾಗಿರುವ ಮಾಹಿತಿಯ ಪ್ರಕಾರ, ಇದನ್ನು ಚಂದ್ರಗಿರಿಯ ವ್ಯಾಪರಿಯೊಬ್ಬನು ಕ್ರಿ.ಶ.1506 ರಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆಯಾದ ಎರಡನೇ ನರಸಿಂಹನಿಗೋಸ್ಕರ ಕಟ್ಟಿದನೆಂಬದು ತಿಳಿದು ಬರುತ್ತದೆ.

ಆನೆಗೊಂದಿ (ಆನೆಗುಂಡಿ) ಆನೆಗುಂಡಿ ಹಳ್ಳಿಯು ಹಂಪಿಯಿಂದ ೧೦ ಕಿ.ಮೀ ದೂರದಲ್ಲಿದ್ದು, ತುಂಗಭದ್ರಾ ನದಿಯ ಉತ್ತರ ಭಾಗದ ದಡದಲ್ಲಿದೆ. ಇದು ಅಂದಿನ ವಿಜಯನಗರ ಸಾಮ್ರಾಜ್ಯದ ಪ್ರಾದೇಶಿಕ ರಾಜಧಾನಿಯಾಗಿತ್ತು. ಇದರ ಅರ್ಥ ಕನ್ನಡದಲ್ಲಿ ಆನೆಗೆ ತೋಡಿದ ಗುಂಡಿ ಎಂದಾಗುತ್ತದೆ. ಈ ಪ್ರದೇಶವು ಹಂಪಿಗಿಂತಲೂ ಪ್ರಾಚೀನವಾಗಿದ್ದು, ರಾಮಾಯಣದ ಪ್ರಕಾರ ಇದನ್ನು ಸುಗ್ರೀವನ (ಮಂಗಗಳ ರಾಜ) ರಾಜ್ಯ ಕಿಷ್ಕಿಂಧೆ ಎಂದು ನಂಬಲಾಗಿದೆ. ಸಮಯಾವಕಾಶವಿದ್ದರೆ ಪ್ರವಾಸಿಗರು ಖಂಡಿತವಾಗಿಯು ಈ ಸ್ಥಳಕ್ಕೆ ಭೇಟಿ ನೀಡಿ ಅಂಜನಾದ್ರಿ ಬೆಟ್ಟವನ್ನು ನೋಡಬಹುದು. ಈ ಬೆಟ್ಟವನ್ನು ದೇವರಾದ ಹನುಮಂತನ ಹುಟ್ಟು ಸ್ಥಳವೆಂದು ನಂಬಲಾಗಿದೆ. ಹಂಪಿಗಿಂತಲೂ ನೆಮ್ಮದಿಯಾದಂಥ ವಾತಾವರಣವನ್ನು ಆನೆಗುಂಡಿಯು ಹೊಂದಿದೆ. ಪ್ರಾಚ್ಯವಸ್ತು ಸಂರಕ್ಷಣಾ ಯೋಜನೆ ಮತ್ತು ಕಿಷ್ಕೀಂದ ಟ್ರಸ್ಟ್ ಇವುಗಳು, ಇಲ್ಲಿಗೆ ಬರುವ ಪ್ರವಾಸಿಗರಿಗೆ ಅತ್ಯುತ್ತಮವಾದ ವ್ಯವಸ್ಥೆಗಳನ್ನು ಕಲ್ಪಿಸಿದ್ದು, ಆದರಾತಿಥ್ಯವು ಮನಸೂರೆಗೊಳಿಸುತ್ತದೆ. ಹೊಸ ಸೇತುವೆ(ಬ್ರಿಡ್ಜ್) ಅನ್ನು ತುಂಗಭದ್ರಾ ನದಿಗೆ ಕಟ್ಟಲಾಗುತಿತ್ತು , ಆದರೆ ಅದು ಮುರಿದು ಬಿದ್ದಿದ್ದು ಇನ್ನೊಂದು ಕಡೆ ಸೇತುವೆ ಕಟ್ಟುವ ಕೆಲಸ ಪ್ರಗತಿಯಲ್ಲಿದೆ. ಮುಂಬರುವ ದಿನಗಳಲ್ಲಿ, ಪ್ರವಾಸಿಗರು ಆನೆಗುಂಡಿಯನ್ನು ಸುಲಭವಾಗಿ ತಲುಪಬಹುದಾಗಿದೆ. ಸದ್ಯ, ಈ ಪ್ರದೇಶವನ್ನು ಸುತ್ತು ಮಾರ್ಗದಿಂದ ತಲುಪಬಹುದಾಗಿದೆ.

ವಿರೂಪಾಕ್ಷ ದೇವಾಲಯ: ಹಂಪೆಯ ಪ್ರಸಿದ್ಧ ದೇವಾಲಯವಾಗಿರುವ ಇದನ್ನು ಪಂಪಾವತಿ ದೇವಾಲಯ ಎಂದೂ ಕರೆಯುವ ವಾಡಿಕೆ ಇದೆ. ವಿರೂಪಾಕ್ಷ ವಿಜಯನಗರ ಅರಸರ ಕುಲದೈವ. ಮೂಲಗುಡಿ ಹೊಯ್ಸಳ ಬಲ್ಲಾಳನ ಕಾಲದಲ್ಲಿ 11ನೇ ಶತಮಾನದಲ್ಲಿ ರಚನೆಯಾಯಿತು. 16ನೇ ಶತಮಾನದ ವೇಳೆಗೆ ಇದಕ್ಕೆ ಅನೇಕ ಭಾಗಗಳು ಸೇರ್ಪಡೆಯಾದವು.

ವಿರೂಪಾಕ್ಷ ದೇವಾಲಯದ ಮುಂಭಾಗ 732 ಮೀ.ಉದ್ದ ಹಾಗೂ 28ಮೀ.ಅಗಲದ ಹಂಪೆ ಬಜಾರ್ ಇದೆ. ಇದು ವಿಜಯನಗರದ ಅತಿ ದೊಡ್ಡ ಬಜಾರ್. ಇಲ್ಲಿ ಮುತ್ತು ರತ್ನ ವಜ್ರವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ಕೃಷ್ಣದೇವರಾಯನ ಕಾಲದಲ್ಲಿ ಹಂಪೆಗೆ ಭೇಟಿ ನೀಡಿದ ಪೋರ್ಚುಗೀಸ್ ಪ್ರವಾಸಿಗ ಡೊಮಿಂಗೋ ಪೇಯಿಸ್ ದಾಖಲಿಸಿದ್ದಾನೆ. ಈಗಲೂ ಇಲ್ಲಿ ಅಂಗಡಿ ಸಾಲುಗಳಿವೆ. ಹಂಪೆ ಬಜಾರ್‌ನ ಪೂರ್ವ ತುದಿಯಲ್ಲಿ ವಿರೂಪಾಕ್ಷ ಗುಡಿಯ ಕಡೆಗೆ ಮುಖಮಾಡಿ ಮಲಗಿರುವ ಬೃಹತ್ ನಂದಿ ವಿಗ್ರಹ ಇದೆ.

ಕೋದಂಡರಾಮ ದೇವಾಲಯ: ಹಂಪೆ ಬಜಾರ್‌ನ ಪೂರ್ವ ತುದಿಯ ಉತ್ತರಕ್ಕೆ ನೈಸರ್ಗಿಕ ಬಂಡೆಯಲ್ಲಿ ಕೆತ್ತಿಸಲಾದ ರಾಮ, ಸೀತೆ ಲಕ್ಷ್ಮಣರ 15 ಅಡಿ ಎತ್ತರದ ವಿಗ್ರಹಗಳು ವಿಸ್ಮಯವನ್ನುಂಟು ಮಾಡುತ್ತವೆ. ಕೋದಂಡರಾಮ ದೇವಾಲಯದ ಸಮೀಪದಲ್ಲೇ ಯಂತ್ರೋದ್ಧಾರಕ ಆಂಜನೇಯ ಗುಡಿ ಕೂಡ ಇದೆ.

ಅಚ್ಯುತರಾಯ ದೇವಸ್ಥಾನ: ಕೋದಂಡರಾಮಯ್ಯ ದೇವಾಲಯದಿಂದ ಮೆಟ್ಟಿಲು ಮಾರ್ಗವಾಗಿ ಸ್ವಲ್ಪ ದೂರ ಪೂರ್ವಕ್ಕೆ ಹೋಗಿ ದಕ್ಷಿಣಕ್ಕೆ ತಿರುಗಿದರೆ ಅಚ್ಯುತರಾಯ ದೇವಸ್ಥಾನ ಇದೆ. ಇದಕ್ಕೆ ಎರಡು ಪ್ರಾಕಾರ ಗೋಡೆಗಳು. ದೇವಾಲಯದ ಎದುರಿನ ಅಂಗಡಿ ಸಾಲುಗಳನ್ನು ಸೂಳೆ ಬಜಾರ್ ಅಥವಾ ರಾಜನರ್ತಕಿಯರ ಬೀದಿ ಎಂದು ಕರೆಯುತ್ತಾರೆ.

ವಿಜಯವಿಠಲ ದೇವಾಲಯ: ಹಂಪೆಯ ಅತ್ಯುತ್ತಮ ಕಟ್ಟಡಗಳಲ್ಲೊಂದು. ಪ್ರೌಢ ದೇವರಾಯನ ಕಾಲದಲ್ಲಿ ಪ್ರಾರಂಭಗೊಂಡ ಈ ದೇವಾಲಯದ ಕಾಮಗಾರಿ ಕೃಷ್ಣದೇವರಾಯ, ಅಚ್ಯುತರಾಯ ಮತ್ತು ಸದಾವಶಿವ ನಗರ ಕಾಲದಲ್ಲೂ ಮುಂದುವರಿಯಿತು. 1565ರಲ್ಲಿ ವಿಜಯನಗರ ಸಾಮ್ರಾಜ್ಯ ಪತನಗೊಂಡಿದ್ದರಿಂದ ದೇವಾಲಯದ ಕಾಮಗಾರಿ ಸ್ಥಗಿತಗೊಂಡು ಕೆಲವು ಭಾಗಗಳು ಅಪೂರ್ಣವಾಗಿ ಉಳಿದಿದೆ.

ಹಜಾರರಾಮ ದೇವಾಲಯ: ಇದು ಕೋಟೆಯೊಳಗೆ, ರಾಜನ ದರ್ಬಾರ್ ಸಭಾಂಗಣದಿಂದ ಉತ್ತರಕ್ಕಿದೆ. ಹಂಪೆಯಲ್ಲಿ ಅಳಿದುಳಿದಿರುವ ಐದು ಪ್ರಮುಖ ದೇವಾಲಯಗಳಲ್ಲೊಂದು. ದೇವಾಲಯದ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತದ ದೃಶ್ಯಗಳು ಹಾಗೂ ವೈಷ್ಣವ ದೇವತೆಗಳ ಶಿಲ್ಪಗಳು ಕಂಡು ಬರುತ್ತವೆ.

ರಾಣಿಯರ ಸ್ನಾನ ಗೃಹ: ಚಂದ್ರಶೇಖರ ದೇವಸ್ಥಾನದಿಂದ ಪಶ್ಚಿಮಕ್ಕೆ ರಸ್ತೆ ಬದಿಯಲ್ಲಿದ್ದ ಹುಲ್ಲು ಹಾಸಿನ ಮಧ್ಯೆ ಕಾಣುವ ಚೌಕಾಕಾರದ ಕಟ್ಟಡವನ್ನು ರಾಣಿಯರ ಸ್ನಾನಗೃಹ ಎಂದು ಕರೆಯುತ್ತಾರೆ. ಕಟ್ಟಡದ ಸುತ್ತಲೂ ಕಂದಕವಿದ್ದು, ಮಧ್ಯೆ 15ಕಿ.ಮೀ. ಸುತ್ತಳತೆ ಹಾಗೂ 1.8ಮೀ. ಆಳದ ಕೊಳ ಇದೆ. ರಾಣಿಯರ ಸ್ನಾನಗೃಹದಿಂದ ಪಶ್ಚಿಮಕ್ಕೆ ಒಂದು ಫರ್ಲಾಂಗ್ ದೂರದಲ್ಲಿರುವ ರಸ್ತೆಯ ಎಡಕ್ಕೆ ಕಿರಿದಾದ ಇಬ್ಬದಿಗಳಲ್ಲೂ ಕಲ್ಲಿನ ತಟ್ಟೆಗಳನ್ನು ಜೋಡಿಸಲಾಗಿದೆ.

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ