ಸೂಲಗಿತ್ತಿ ನರಸಮ್ಮ

ಸಾಧಕರು

ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಸಾಮಾಜಿಕ ಕಾರ್ಯಕರ್ತೆ. ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಕೃಷ್ಣಾಪುರದ ಮೂಲದವರಾದ ಸೂಲಗಿತ್ತಿ ನರಸಮ್ಮ ಆಸ್ಪತ್ರೆ, ವೈದ್ಯರಿಲ್ಲದ ಕಾಲದಲ್ಲಿ ಆಧುನಿಕ ಕಾಲದ ಹೆರಿಗೆ ತಜ್ಞೆಯಂತೆ 15,000 ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ. ಅವರ ಈ ಕೆಲಸವನ್ನು ಪರಿಗಣಿಸಿ ಭಾರತ ಸರ್ಕಾರವು 2018ರಲ್ಲಿ ಪದ್ಮಶ್ರೀ ಹಾಗೂ 2013ರಲ್ಲಿ ವಯೋಶ್ರೇಷ್ಟ ಸಮ್ಮಾನ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ. ಇವರು ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಅನ್ನು ಪಡೆದಿದ್ದಾರೆ.

Products from Amazon.in

ನರಸಮ್ಮನವರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೃಷ್ಣಾಪುರದಲ್ಲಿ ಜನಿಸಿದರು. ಕರ್ನಾಟಕವಾದರೂ ಸುತ್ತಲೂ ಆಂಧ್ರ ರಾಜ್ಯ, ಅವರ ಆಡುಭಾಷೆ ತೆಲುಗು. ನರಸಮ್ಮ ಅವರು ಅಲೆಮಾರಿ ಜನಾಂಗಕ್ಕೆ ಸೇರಿದವರು. ನರಸಮ್ಮ ಅವರಿಗೆ 12 ವರ್ಷದಲ್ಲಿ ಮದುವೆಯಾಗಿತ್ತು. 20ನೇ ವಯಸ್ಸಿನಲ್ಲಿ ಅಂದರೆ 1940ರಲ್ಲಿ ತನ್ನ ಚಿಕ್ಕಮ್ಮನ ಹೆರಿಗೆಗೆ ನರಸಮ್ಮ ಸಹಾಯ ಮಾಡಿದ್ದರು. ನರಸಮ್ಮ ಮತ್ತು ಅವರ ಪತಿ ಆಂಜಿನಪ್ಪ ಅವರಿಗೆ 12 ಮಕ್ಕಳಿದ್ದರು. ಅವರಲ್ಲಿ ನಾಲ್ವರು ಗಂಡು ಮಕ್ಕಳು ಚಿಕ್ಕವರಿರುವಾಗಲೇ ತೀರಿಕೊಂಡಿದ್ದಾರೆ. 22 ಮೊಮ್ಮಕ್ಕಳಿದ್ದಾರೆ.

ನರಸಮ್ಮ ಅವರು ಅಲೆಮಾರಿ ಜನಾಂಗಕ್ಕೆ ಸೇರಿದವರು. ಆ ಜನಾಂಗದ ಅದೆಷ್ಟೋ ಮಹಿಳೆಯರು ಕೃಷ್ಣಾಪುರಕ್ಕೆ ಬಂದು ನರಸಮ್ಮ ಅವರಲ್ಲಿ ಆಶ್ರಯ ಪಡೆದು ಹೆರಿಗೆ ಮಾಡಿಸಿಕೊಂಡಿದ್ದಾರೆ. ಗರ್ಭಿಣಿಯರಿಗೆ ನೈಸರ್ಗಿಕ ಆಯುರ್ವೇದ ಔಷಧಗಳನ್ನು ಕೂಡ ತಯಾರಿಸಿ ಕೊಡುತ್ತಿದ್ದರು. ಗರ್ಭಿಣಿಯರ ಭ್ರೂಣದ ನಾಡಿಮಿಡಿತ ಅರ್ಥ ಮಾಡಿಕೊಂಡು, ಅದರ ಆರೋಗ್ಯ, ಮಗುವಿನ ತಲೆ ಯಾವ ಕಡೆಗಿದೆ, 8-9 ತಿಂಗಳಲ್ಲಿ ಮಗು ಗಂಡೊ-ಹೆಣ್ಣೊ ಎಂದು ಕೂಡ ಹೇಳುವಷ್ಟು ನಿಪುಣರು.

ಇವರ ಅಜ್ಜಿ ಮರಿಗೆಮ್ಮ ಹೆರಿಗೆ ಮಾಡಿಸುತ್ತಿದ್ದರು. ಅವರ ಜೊತೆ ನರಸಮ್ಮ ಅವರು ಕೂಡ ಹೋಗುತ್ತಿದ್ದರು. ಹೆರಿಗೆ ಮಾಡಿಸುವಾಗ ಬೇರೆ ಯಾರನ್ನೂ ಒಳಕ್ಕೆ ಬಿಡುತ್ತಿರಲಿಲ್ಲ ಆದರೆ ಇವರನ್ನು ಮಾತ್ರ ಜೊತೆಯಲ್ಲೇ ಇಟ್ಟುಕೊಳ್ಳುತ್ತಿದ್ದರು ಆಗ ಈಕೆಗೆ 16-17ರ ವಯಸ್ಸು. ಹನುಮಕ್ಕ ಎಂಬುವವರಿಗೆ ಹೆರಿಗೆ ನೋವಾದಾಗ, ತನ್ನ ಅಜ್ಜಿ ಇರಲಿಲ್ಲ, ಮನೆಯಲ್ಲಿ ಯಾರೂ ಇರಲಿಲ್ಲ. ಆಗ ನರಸಮ್ಮನವರೇ ಹೆರಿಗೆ ಮಾಡಿಸಿದೆ. ಅದೇ ಮೊದಲು ಮಾಡಿಸಿದ ಹೆರಿಗೆ. ಅಂದಿನಿಂದ ಹಿಡಿದು ಇಲ್ಲಿಯವರೆಗೆ 15 ಸಾವಿರ ಹೆರಿಗೆಗಳನ್ನು ಮಾಡಿಸಿರುವ ಖ್ಯಾತಿ 97 ವರ್ಷದ (2018ರ ಪ್ರಕಾರ) ನರಸಮ್ಮನವರಿಗೆ ಸಲ್ಲುತ್ತದೆ. ಜನರು ಹೆರಿಗೆ ಮಾಡಿಸಿದ್ದಕ್ಕೆ ರವಿಕೆ ಬಟ್ಟೆ, ಭತ್ತ, ರಾಗಿ ಇತ್ಯಾದಿಗಳನ್ನು ನರಸಮ್ಮನಿಗೆ ಕೊಡುತ್ತಿದ್ದರು. ವರ್ಷದ ಫಸಲು ಬಂದಾಗ ಬೆಳೆಯ ರಾಶಿಯಲ್ಲಿ ಎಷ್ಟೋ ಮಂದಿ ಮೊದಲನೇ ‘ಮೊರ’ ಇವರಿಗೆ ಕೊಡುತ್ತಿದ್ದರು.

ಗಿಡಮೂಲಿಕೆಗಳಿಂದಾಗಿ ಸಲೀಸಾಗಿ ಹೆರಿಗೆ ಮಾಡಿಸುತ್ತಿದ್ದರು. ಬುಡುಬುಡಿಕೆಯವರು ಗಿಡಮೂಲಿಕೆ ಔಷಧ ಹೆಚ್ಚು ಬಳುತ್ತಿದ್ದರು. ಅವರಿಂದ ಗಿಡಮೂಲಿಕೆ ಔಷಧ ಮಾಡುವುದನ್ನು ತಿಳಿದುಕೊಂಡು. ಕಷಾಯ ಮಾಡುವುದು, ಕಸ ಬೀಳಿಸುವುದು ಎಲ್ಲವನ್ನು ಕಲಿತರು. ಹೆರಿಗೆಯಷ್ಟೇ ಅಲ್ಲ, ಕಣ್ಣಿಗೆ ಬಿದ್ದ ಕಸ ತೆಗೆಯುವುದು, ಗಂಟಲಿನ ಶೀತದ ಗಟ್ಟೆ ಹೋಗಲು, ಕಿರುನಾಲಿಗೆ ಬೆಳೆದರೆ ಎಲ್ಲಕ್ಕೂ ಔಷಧ ಮಾಡುತ್ತಿದ್ದರು. ಮಗು ಹುಟ್ಟಿ 9 ದಿನದವರೆಗೂ, ಅಂದರೆ ‘ಪುರಡಿ’ ಮಾಡೋವರೆಗೂ ಇವರೇ ಬಾಣಂತಿ, ಮಗುವನ್ನು ನೋಡಿಕೊಳ್ಳುತ್ತಿದ್ದರು. ಶಿಶುವಿಗೆ ನೀರು ಸಹ ಇವರೇ ಹಾಕುತ್ತಿದ್ದರು. ಪ್ರಸ್ತುತ ಅವರ ಒಂದಿಬ್ಬರು ಹೆಣ್ಣು ಮಕ್ಕಳು ಮತ್ತು ಸೊಸೆಯಂದಿರು ಸೂಲಗಿತ್ತಿ ನರಸಮ್ಮನವರ ಪವಿತ್ರ ವಿದ್ಯೆಯನ್ನು ಮುಂದುವರಿಸುತ್ತಿದ್ದಾರೆ.

Products from Amazon.in

ತಮ್ಮ ಸಾಧನೆಗಾಗಿ ನರಸಮ್ಮ ಅವರಿಗೆ ಈ ಕೆಳಗಿನ ಸನ್ಮಾನಗಳು ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. 2012ರಲ್ಲಿ ಅವರನ್ನು ಕರ್ನಾಟಕ ಸರ್ಕಾರ ಡಿ.ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಿತು. 2014ರಲ್ಲಿ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು. 2013 ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, 2013 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , 2013ರಲ್ಲಿ ಭಾರತ ಸರ್ಕಾರದ ವಯೋಶ್ರೇಷ್ಟ ಸಮ್ಮಾನ , 2018ರಲ್ಲಿ ದೇಶದ ಮೂರನೇ ಅತ್ಯಂತ ಶ್ರೇಷ್ಟ ನಾಗರಿಕ ಸನ್ಮಾನವಾದ ಪದ್ಮಶ್ರೀ ಪ್ರಶಸ್ತಿ ಫಲಿಸಿತು.

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ