ಲೋಪಸಂಧಿ

ಕನ್ನಡ ವ್ಯಾಕರಣ

‘ಊರು + ಅಲ್ಲಿ’ ಎಂಬಲ್ಲಿ ‘ಉ’ ಎಂಬ ಸ್ವರದ ಮುಂದೆ ‘ಅ’ ಎಂಬ ಸ್ವರ ಬಂದಿದೆ. ಕೂಡಿಸಿ ಬರೆದರೆ ‘ಊರ್ ಅಲ್ಲಿ’ = ‘ಊರಲ್ಲಿ’ ಎಂದಾಯಿತು. ಅಂದರೆ ರಕಾರದಲ್ಲಿರುವ ‘ಉ’ ಕಾರ ಬಿಟ್ಟುಹೋಯಿತು.
ಇದರ ಹಾಗೆ ಕೆಳಗಿನ ಇನ್ನೂ ಕೆಲವು ಉದಾಹರಣೆಗಳನ್ನು ನೋಡಿರಿ:-

ಮಾತು + ಇಲ್ಲ = ಮಾತಿಲ್ಲ (ಉಕಾರ ಇಲ್ಲದಾಯಿತು)
(ಉ + ಇ)
ಆಡು + ಇಸು = ಆಡಿಸು (ಉಕಾರ ಇಲ್ಲದಾಯಿತು)
(ಉ + ಇ)
ಬೇರೆ + ಒಬ್ಬ = ಬೇರೊಬ್ಬ (ಎಕಾರ ಇಲ್ಲದಾಯಿತು)
(ಎ + ಒ)
ನಿನಗೆ + ಅಲ್ಲದೆ = ನಿನಗಲ್ಲದೆ (ಎಕಾರ ಇಲ್ಲದಾಯಿತು)
(ಎ + ಅ)
ನಾವು + ಎಲ್ಲಾ = ನಾವೆಲ್ಲಾ (ಉಕಾರ ಬಿಟ್ಟುಹೋಯಿತು)
(ಉ + ಎ)

ಮೇಲಿನ ಉದಾಹರಣೆಗಳಲ್ಲೆಲ್ಲಾ, ಎರಡು ಸ್ವರಗಳು ಸಂಧಿಸುವಾಗ ಮೊದಲನೆಯ ಸ್ವರವು ಇಲ್ಲದಂತಾಗುವುದು (ಲೋಪವಾಗುವುದು) ಕಂಡು ಬರುತ್ತದೆ. ಆದರೆ ಕೆಲವು ಕಡೆಗೆ ಸ್ವರದ
ಮುಂದೆ ಸ್ವರವು ಬಂದಾಗ ಲೋಪ ಮಾಡಿದರೆ ಅರ್ಥವು ಕೆಡುವುದು. ಈ ಕೆಳಗಿನ ಉದಾಹರಣೆಗಳನ್ನು ನೋಡಿರಿ:-

ಮನೆ + ಇಂದ – ಇಲ್ಲಿ ಲೋಪಮಾಡಿದರೆ ‘ಮನಿಂದ’ ಎಂದಾಗುವುದು
(ಎ + ಇ)
ಗುರು + ಅನ್ನು – ಇಲ್ಲಿ ಲೋಪಮಾಡಿದರೆ ‘ಗುರನ್ನು’ ಆಗುವುದು
(ಉ + ಅ)

ಹಾಗಾದರೆ ಅರ್ಥವು ಹಾಳಾಗುವಲ್ಲಿ ಲೋಪ ಮಾಡಬಾರದು. ಅಲ್ಲಿ ಬೇರೆ ವಿಧಾನವನ್ನು (ಮಾರ್ಗವನ್ನು) ಅನುಸರಿಸಬೇಕಾಗುವುದು. ಹಾಗಾದರೆ ಒಟ್ಟಿನಲ್ಲಿ ಲೋಪಸಂಧಿಗೆ ಸೂತ್ರವನ್ನು
ಹೀಗೆ ಹೇಳಬಹುದು:-

“ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು. ಇದಕ್ಕೆ
ಲೋಪಸಂಧಿ ಎಂದು ಹೆಸರು.”

ಉದಾಹರಣೆಗೆ:-

ಊರು + ಅಲ್ಲಿ = ಊರಲ್ಲಿ (ಉಕಾರ ಲೋಪ)
(ಉ + ಅ)
ದೇವರು + ಇಂದ = ದೇವರಿಂದ (ಉಕಾರ ಲೋಪ)
(ಉ + ಇ)
ಬಲ್ಲೆನು + ಎಂದು = ಬಲ್ಲೆನೆಂದು (ಉಕಾರ ಲೋಪ)
(ಉ + ಎ)
ಏನು + ಆದುದು = ಏನಾದುದು (ಉಕಾರ ಲೋಪ)
(ಉ + ಆ)
ಇವನಿಗೆ + ಆನು = ಇವನಿಗಾನು (ಎಕಾರ ಲೋಪ)
(ಎ + ಆ)
ಅವನ + ಊರು = ಅವನೂರು (ಅಕಾರ ಲೋಪ)
(ಅ + ಊ)

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ