ರಾಷ್ಟ್ರ(ತ್ರಿವರ್ಣ) ಧ್ವಜ ಕುರಿತು ಮಾಹಿತಿ

ಕರ್ನಾಟಕದ ಇತಿಹಾಸ

ರಾಷ್ಟ್ರಧ್ವಜದ ಇತಿಹಾಸ 

1. ಮೊದಲ ರಾಷ್ಟ್ರಧ್ವಜ ಹಾರಿದ್ದು ಆ. 7 1906ರಲ್ಲಿ: ಆಗಸ್ಟ್ 1906ರಲ್ಲಿ ರಾಷ್ಟ್ರಧ್ವಜವನ್ನು ಮೊದಲ ಬಾರಿಗೆ ಕೋಲ್ಕತ್ತಾದ ಪಾರ್ಸಿ ಬಗನ್ ಸ್ಕ್ವೇರ್ (ಗ್ರೀನ್ ಪಾರ್ಕ್) ನಲ್ಲಿ ಹಾರಿಸಲಾಗಿತ್ತು.

2. ಎರಡನೇ ರಾಷ್ಟ್ರಧ್ವಜವನ್ನು ಸ್ವಾತಂತ್ರ್ಯ ಹೋರಾಟಗಾರ್ತಿ ಮೇಡಮ್ ಭಿಕಾಜಿಯವರ ತಂಡ 1907ರಲ್ಲಿ ಪ್ಯಾರಿಸ್ ನಲ್ಲಿ ಹಾರಿಸಿತ್ತು.

3. ಮೂರನೇ ಬಾರಿ ರಾಷ್ಟ್ರಧ್ವಜವನ್ನು ಹೋಮ್ ರೂಲ್ ಚಳುವಳಿ ಸಮಯದಲ್ಲಿ ಡಾ.ಅನಿಬೆಸೆಂಟ್ ಮತ್ತು ಲೋಕಮಾನ್ಯ ತಿಲಕ್ 1917ರಲ್ಲಿ ಹಾರಿಸಿದರು. ಆಗ ಭಾರತದ ಸ್ವಾತಂತ್ರ್ಯ ಚಳುವಳಿಗೆ ತಿರುವು ಪಡೆದುಕೊಂಡಿತ್ತು.   

4. ಈಗಿನ ರಾಷ್ಟ್ರಧ್ವಜವನ್ನು  ರೈತ ಮತ್ತು ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯ ಅವರು ರೂಪಿಸಿದ್ದರು. 1921ರಲ್ಲಿ ಕಾಂಗ್ರೆಸ್ ಸಮಿತಿ ಬೆಜವಾಡದಲ್ಲಿ(ಆಂಧ್ರದ ವಿಜಯವಾಡ) ಭೇಟಿಯಾದಾಗ ಪಿಂಗಳಿ ವೆಂಕಯ್ಯ ರೂಪಿಸಿದ ರಾಷ್ಟ್ರಧ್ವಜವನ್ನು ಗಾಂಧೀಜಿಯವರು ತೆಗೆದುಕೊಂಡರು. ಹಿಂದು ಮತ್ತು ಮುಸ್ಲಿಂರನ್ನು ಪ್ರತಿನಿಧಿಸುವಂತೆ ಕೆಂಪು ಮತ್ತು ಹಸಿರು ಎರರು ಬಣ್ಣಗಳಿಂದ ಮಾಡಲಾಗಿತ್ತು. ಬಿಳಿ ಬಣ್ಣ ಭಾರತದ ಉಳಿದ ಸಮುದಾಯಗಳನ್ನು ಸೂಚಿಸುವಂತಿರಲಿ ಎಂದು ಗಾಂಧೀಜಿ ಸಲಹೆ ನೀಡಿದ್ದರು. ತಿರುಗುತ್ತಿರುವ ಚಕ್ರ ದೇಶದ ಪ್ರಗತಿಯ ಸಂಕೇತವನ್ನು ಸೂಚಿಸುತ್ತಿತ್ತು.

5. 1931ರಲ್ಲಿ ಭಾರತದ ರಾಷ್ಟ್ರಧ್ವಜದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು. ಕೇಸರಿ, ಬಿಳಿ ಮತ್ತು ಹಸಿರುವ ಬಣ್ಣಗಳ ನಡುವೆ ನೀಲಿ ಬಣ್ಣದ ಗಾಂಧಿಯವರ ಚರಕ ಒಳಗೊಂಡ ಮೂರು ಬಣ್ಣಗಳಿಂದ ಕೂಡಿದ ಈ ಬಾವುಟ ಭಾರತದ ರಾಷ್ಟ್ರಧ್ವಜ ಎಂದು ತೀರ್ಮಾನಿಸಲಾಯಿತು.

6. ಜುಲೈ 22, 1947ರಲ್ಲಿ ತ್ರಿವರ್ಣ ಧ್ವಜವನ್ನು ನಮ್ಮ ಸಂವಿಧಾನ ರಾಷ್ಟ್ರಧ್ವಜವಾಗಿ ಅಂಗೀಕರಿಸಿತು. ಸ್ವಾತಂತ್ರ್ಯ ನಂತರ ರಾಷ್ಟ್ರಧ್ವಜದಲ್ಲಿರುವ ಮೂರು ಬಣ್ಣಗಳನ್ನು ಹಾಗೆಯೇ ಉಳಿಸಿಕೊಳ್ಳಲಾಯಿತು. ಆದರೆ ಮಧ್ಯದಲ್ಲಿರುವ ಚರಕಕ್ಕೆ ಬದಲಾಗಿ ಸಾಮ್ರಾಟ್ ಅಶೋಕನ ಧರ್ಮ ಚಕ್ರವನ್ನು ಬಳಸಿಕೊಳ್ಳಲಾಯಿತು. ಕಾಂಗ್ರೆಸ್ ಪಕ್ಷದ ಈ ತ್ರಿವರ್ಣ ಧ್ವಜ ಸ್ವತಂತ್ರ್ಯ ಭಾರತದ ರಾಷ್ಟ್ರಧ್ವಜವಾಯಿತು.

ರಾಷ್ಟ್ರಧ್ವಜ ತಯಾರಾಗೋದು ಕರ್ನಾಟದಲ್ಲಿ.

ಭಾರತದ ಹೆಮ್ಮೆಯ ರಾಷ್ಟ್ರಧ್ವಜ ತಯಾರಾಗೋದು ಕರ್ನಾಟದಲ್ಲಿ. ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ರಾಷ್ಟ್ರಧ್ವಜವನ್ನು ತಯಾರಿಸಲು ಲೈಸೆನ್ಸ್ ಇರೋ ಭಾರತದ ಏಕೈಕ ಸಂಸ್ಥೆ ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವಾಗಿದೆ. ರಾಷ್ಟ್ರಧ್ವಜ ತಯಾರಿಸಲು ಬೇಕಾಗುವ ಕಚ್ಚಾವಸ್ತುಗಳನ್ನು ಧಾರವಾಡ ಮತ್ತು ಬಾಗಲಕೋಟೆಯ 2 ಕೈಮಗ್ಗ ಘಟಕಗಳು ರವಾನಿಸುತ್ತಿದೆ.

ಭಾರತದ ನಿಯಮಗಳ ಪ್ರಕಾರ ರಾಷ್ಟ್ರಧ್ವಜ ಎರಡನೇ ಮೂರರಷ್ಟು ಪ್ರಮಾಣದಲ್ಲಿರುತ್ತದೆ. ಅಂದ್ರೆ ಬಾವುಟ ಅಗಲಕ್ಕಿಂತ ಉದ್ದ 1.5ರಷ್ಟು ಹೆಚ್ಚಾಗಿರಬೇಕು. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಉದ್ದ ಮತ್ತು ಅಗಲ ಸಮವಾಗಿರಬೇಕು.

ತ್ರಿವರ್ಣ ಧ್ವಜವನ್ನು ಪಿಂಗಳಿ ವೆಂಕಯ್ಯ  ವಿನ್ಯಾಸಗೊಳಿಸಿದ್ದಾರೆ. ಭಾರತದ ರಾಷ್ತ್ರೀಯ ಧ್ವಜ’ದ ಈಗಿನ ಅವತರಣಿಕೆಯನ್ನು  ಜುಲೈ 22, 1947ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಪಂಡಿತ್ ಜವಾಹರ್ ಲಾಲ್ ನೆಹರು ಅವರು ರಾಷ್ಟ್ರಧ್ವಜವನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಬ್ರಿಟಿಷರಿಂದ ಆಗಸ್ಟ್ 15, 1947ರಲ್ಲಿ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು, ಈ ಸಭೆ.

ಅಂದಿನಿಂದ ಜನವರಿ 26, 1950 ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯಭಾರದ (dominion) ಬಾವುಟವಾಗಿಯೂ, 26, ಜನವರಿ, 1950ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ. ಹಿಂದಿ ಭಾಷೆಯಲ್ಲಿ ತಿರಂಗಾ, ಕನ್ನಡದಲ್ಲಿ ತ್ರಿವರ್ಣ – ಮೂರು ವರ್ಣಗಳ ಧ್ವಜವೆಂದು ಸೂಚಿಸುವ ಪದಗಳು ಭಾರತದ ಬಾವುಟವನ್ನು ಸೂಚಿಸುವಾಗ ಬಳಕೆಯಲ್ಲಿದೆ.

ತ್ರಿವರ್ಣ ಧ್ವಜದ ವೈಶಿಷ್ಟ್ಯ

ತ್ರಿವರ್ಣ ಧ್ವಜ ಅಗಲದುದ್ದಕ್ಕೂ ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳಿ ಬಣ್ಣ, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. ಬಾವುಟದ ಮಧ್ಯದಲ್ಲಿ ಇಪ್ಪತ್ತುನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರದ್ವಜ. ಈ ನಮ್ಮ ಸ್ವಾತಂತ್ರ್ಯ ದೇಶದ ಸಂಕೇತವಾಗಿರುವ ರಾಷ್ಟ್ರಧ್ವಜದ ಅವಹೇಳನ ರಾಷ್ಟ್ರದ್ರೋಹವಾಗಿರುತ್ತದೆ. ಅದರ ಉಳಿವಿಗಾಗಿ ಬಲಿದಾನವಾಗಲು ಸದಾ ಸಿದ್ದವಾಗಿರುವ ನಾವುಗಳು ಅದರ ಮೇಲಿರುವ ಭಕ್ತಿಯನ್ನೇ ದೇಶಭಕ್ತಿ ಎನ್ನುತ್ತೇವೆ. ಅಂದಿನ ಪ್ರಧಾನಿಯಾಗಿದ್ದ ಪಂಡಿತ್ ಜವಾಹರ್ ಲಾಲ್ ನೆಹರು 1947 ಜುಲೈ 22 ರಂದು ಅಸೆಂಬ್ಲಿಯಲ್ಲಿ ನಮ್ಮ ರಾಷ್ಟ್ರ ದ್ವಜವನ್ನು ದೇಶಕ್ಕೆ ಅರ್ಪಿಸಿದರು.

ನಮ್ಮ ಸರಕಾರವು ಧ್ವಜ ಕೇವಲ ಕೈ ನೆಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು. ಅದು ಉಣ್ಣೆಯ ಅಥವಾ ರೇಷ್ಮೆಯ ಇಲ್ಲವೇ ಹತ್ತಿಯದಾದರೂ ಅಡ್ಡಿಯಿಲ್ಲ. ಆದರೆ ಅದು ಕೈ ನೂಲು ಮತ್ತು ಕೈ ನೆಯ್ಗೆಯದೇ ಆಗಿರಬೇಕು. ಕೇಸರಿ- ಬಿಳಿ -ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿ ಇದ್ದು ನೀಲಿಚಕ್ರವು ಹೆಚ್ಹು ಕಡಿಮೆ ಬಿಳಿ ಬಣ್ಣದ ಅಡ್ಡ ಗೆರೆಗಳಷ್ಟಿದ್ದು, ಅದರಲ್ಲಿ ಇಪ್ಪತ್ತು ನಾಲ್ಕು ರೇಖೆಗಳಿವೆ. ದ್ವಜದ ಉದ್ದ ಮತ್ತು ಅಗಲ 3:2 ಪ್ರಮಾಣದಲ್ಲಿರ ತಕ್ಕದ್ದು ಎಂದು ತಿಳಿಸಿದೆ.

ನಮ್ಮ  ರಾಷ್ಟ್ರ ಬಾವುಟದ ಇತಿಹಾಸದಲ್ಲಿ ಕರ್ನಾಟಕದ ಪಾತ್ರ

ರಾಷ್ಟ್ರಧ್ವಜ ತಯಾರಿಸುವ ಹಕ್ಕು ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಉತ್ತರ ಕರ್ನಾಟಕದಾದ್ಯಂತ ಒಟ್ಟು 52 ಇಂತಹ ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿವೆ. ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು. ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ.

ನಮ್ಮ ಪವಿತ್ರ ಭಾರತಾಂಬೆಯ ಕೀರ್ತಿಯು ಮುಗಿಲೆತ್ತರಕ್ಕೆ ಏರಲಿ, ಎಲ್ಲಕ್ಕಿಂತ ಶ್ರೇಷ್ಠವಾದ ನಮ್ಮ ರಾಷ್ಟ್ರದ ಧ್ಯೇಯೋದ್ದೇಶಗಳು ಎಲ್ಲಕ್ಕಿಂತ ಎತ್ತರದಲ್ಲಿ ರಾರಾಜಿಸಲಿ, ಎಂಬ ಸಂಕೇತವನ್ನು ನಾಲ್ಕು ದಿಕ್ಕುಗಳಿಗೂ ತಿಳಿಯಪಡಿಸುವುದೇ ನಮ್ಮ ರಾಷ್ಟ್ರ ಧ್ವಜವನ್ನು ಮೇಲಕ್ಕೆ ಹಾರಿಸುವ ಉದ್ದೇಶ.

ನಮ್ಮ ರಾಷ್ಟ್ರಧ್ವಜದ ಬಣ್ಣಗಳ ವಿಶೇಷತೆ

ಕೇಸರಿ:– ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆವ ಬಲಿದಾನಗಳ ಸಂಕೇತವಾಗಿದೆ.
ಬಿಳಿಬಣ್ಣ :- ಪವಿತ್ರ ಮನಸ್ಸಿನವರೊಂದಿಗೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತವಾಗಿದೆ. ಇದು ಸತ್ಯ, ಶಾಂತಿ ಮತ್ತು ಶುದ್ಧತೆಯ ಸಂಕೇತವಾಗಿದೆ.
ಹಸಿರು ಬಣ್ಣ;– ಪ್ರಕೃತಿಯೊಡನೆ ಮನುಷ್ಯನಿಗಿರಬೇಕಾದ ಅವಿನಾಭಾವ ಸಂಬಂಧವನ್ನು ತಿಳಿಸುತ್ತಾ, ಹಸಿರು ಜೀವರಾಶಿಗಳನ್ನು ಅವಲಂಬಿಸಿರುವ ಮನುಷ್ಯ ಮತ್ತು ಭೂಮಿಯ ಅನೂಹ್ಯ ಬಾಂಧವ್ಯಗಳ ಸಂಕೇತವಾಗಿದೆ. ಹಾಗಾಗಿ ಹಸಿರು ಬಣ್ಣ ಪ್ರಗತಿಯ ಸಂಕೇತವಾಗಿದೆ. ಮಧ್ಯದಲ್ಲಿರುವ ಅಶೋಕ ಚಕ್ರವು ಧರ್ಮದ ಸಂಕೇತವಾಗಿದೆ.

ರಾಷ್ಟ್ರ ಧ್ವಜವನ್ನು ಸರಿಯಾಗಿ ಪ್ರದರ್ಶನ ಮಾಡುವ ಕೆಲವು ವಿಧಾನಗಳು

  1. ಧ್ವಜವನ್ನು ಶೀಘ್ರಗತಿಯಲ್ಲಿ ಏರಿಸಬೇಕು ಮತ್ತು ಇಳಿಸುವಾಗ ನಿಧಾನಗತಿಯಲ್ಲಿ ಇಳಿಸಬೇಕು.
  2. ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದ ತನಕ ಮಾತ್ರ ಹಾರಿಸಬೇಕು.
  3. ರಾಷ್ಟ್ರ ಧ್ವಜವನ್ನು ಕೆಲವು ಕಡೆ ಎಲ್ಲ ದಿನಗಳಲ್ಲೂ, ಇನ್ನು ಕೆಲವು ಕಡೆ ಕೇವಲ ವಿಶೇಷ ದಿನಗಳಲ್ಲಿ ಮಾತ್ರ ಹಾರಿಸಲಾಗುತ್ತದೆ.
  4. ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಮತ್ತು ಗಾಂಧಿಜಯಂತಿ ಹಾಗೂ ರಾಷ್ಟ್ರೀಯ ವಿಶೇಷ ದಿನಗಳ ಜೊತೆಗೆ ಸರಕಾರದ ನಿರ್ದೇಶನದ ಮೇರೆಗೆ ರಾಷ್ಟ್ರಮಟ್ಟದ ಆಚರಣೆಯ ಸಂದರ್ಭಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬಹುದು.
  5. ಧ್ವಜ ಏರಿಸುವಾಗ ಧ್ವಜದ ಹಸಿರು ಬಣ್ಣ ಕೆಳಗೆ ಇರುವಂತೆ ಕೇಸರಿ ಬಣ್ಣ ಮೇಲೆ ಇರುವಂತೆ ಹಾರಿಸಬೇಕು. ಯಾವುದೇ ಕಾರಣಕ್ಕೂ ನೆಲದ ಮೇಲೆ ಹಾಕಬಾರದು, ಹಾಗೆಯೇ ತಲೆಕೆಳಗಾಗಿ ಹಾರಿಸಬಾರದು.
  6. ರಾಷ್ಟ್ರ ಧ್ವಜವನ್ನು ಹಾರಿಸಿದ ನಂತರ ರಾಷ್ಟ್ರಗೀತೆ ಜನಗಣ ಮನವನ್ನು ಹಾಡಲೇಬೇಕು.
  7. ರಾಷ್ಟ್ರಧ್ವಜವನ್ನು ಉರಿಸುವುದಾಗಲಿ, ಕೆಡಿಸುವುದಾಗಲಿ, ಕಾಲಡಿಯಲ್ಲಿ ಹಾಕುವುದಾಗಲಿ, ಹಾಳುಗೆಡುವುದಾಗಲಿ ಅಥವಾ ಅದಕ್ಕೆ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದು ಕೊಂಡರೆ, ಮಾತು, ಬರಹ ಅಥವಾ ಕೃತ್ಯದ ಮೂಲಕ ಅಗೌರವ ತೋರಿದರೆ ರಾಷ್ಟ್ರೀಯ
  8. ಗೌರವದ ಅವಮಾನ ವಿರೋದಿ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿ ಪಡಿಸಲಾಗುವುದು.
  9. ಹವಾಮಾನದ ವೈಪರೀತ್ಯದಿಂದ ಧ್ವಜವು ಹಾಳಾಗದಂತೆ ಹಾರುತ್ತಿರುವ ಧ್ವಜವನ್ನು ಕಾಪಾಡಬೇಕು.
  10. ವೇದಿಕೆಯ ಮೇಲೆ ಬಳಸುವಂತಿದ್ದಲ್ಲಿ ಸಭಿಕರ ಎದುರಿಗೆ ನಿಂತು ಭಾಷಣ ಮಾಡುವವರ ಬಲಕ್ಕೆ ಧ್ವಜ ಕೋಲಿನಿಂದ ಅದನ್ನು ಹಾರಿಸತಕ್ಕದು
  11. ಸಮ್ಮೇಳನಗಳು ಇತರ ಕಾರ್ಯಕ್ರಮಗಳು ನಡೆಯುವಾಗ ವೇದಿಕೆಯ ಮೇಲಿರುವ ಅಧ್ಯಕ್ಷ ಸ್ಥಾನಕ್ಕಿಂತ ಎತ್ತರದಲ್ಲಿ ನಮ್ಮ ರಾಷ್ಟ್ರದ್ವಜ ಹಾರಾಡತಕ್ಕದ್ದು
  12. ಶಾಲೆ ಕಾಲೇಜುಗಳು, ಕ್ರೀಡಾ ಶಿಬಿರಗಳು, ಸ್ಕೌಟ್ಸ್ ಶಿಬಿರಗಳು ನಂತರ ವಿಶೇಷ ಸಂದರ್ಭಗಳಲ್ಲಿ ಮಕ್ಕಳ ಮನಸ್ಸಿನಲ್ಲಿ ವಿಶೇಷ ಗೌರವ ಮೂಡಿಸಲು ರಾಷ್ಟ್ರಧ್ವಜ ಹಾರಿಸಬಹುದು.

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ