ರಾಷ್ಟ್ರಕವಿ ಗೋವಿಂದ ಪೈ

ಕನ್ನಡ ಸಾಹಿತ್ಯ ಸಾಧಕರು ಸಾಹಿತಿಗಳು

 ‘ತಾಯಬಾರ ಮೊಗವತೋರ ಕನ್ನಡಿಗರ ಮಾತೆಯೆ…’ ಈ ಪದ್ಯವನ್ನು ಯಾರು ತಾನೆ ಕೇಳಿಲ್ಲ. ಈ ಪದ್ಯದ  ಅರ್ಥವಂತಿಕೆಯ ಸೆಳೆತಕ್ಕೊಳಗಾಗಿ ಚಲನಚಿತ್ರ ಒಂದರಲ್ಲೂ ಅಳವಡಿಸಿಕೊಂಡು ಕನ್ನಡಿಗರೆಲ್ಲ ಹಾಡಿ ಸಂತೋಷಿಸಿದರು. ಈ ಗೀತೆ ಬರೆದ ಕವಿಯೇ ಮಂಜೇಶ್ವರ ಗೋವಿಂದ ಪೈಗಳು. 

ಬಾಲ್ಯ ಮತ್ತು ವ್ಯಾಸಂಗ

ಗೋವಿಂದ ಪೈಗಳು ಮೂಲತಃ ಮಂಗಳೂರಿನವರು. ತಂದೆ ಮಂಗಳೂರು ತಿಮ್ಮಪ್ಪ ಪೈಗಳು ಮತ್ತು ತಾಯಿ ದೇವಕಿಯಮ್ಮ. ತಾಯಿಯ ತೌರುಮನೆ ಮಂಜೇಶ್ವರ. ಅವರು ಕಾಸರಗೋಡು ತಾಲೂಕಿನ ಮಂಜೇಶ್ವರದ ಅಜ್ಜನ ಮನೆಯಲ್ಲಿ ಮಾರ್ಚ್ 23, 1882 ರಂದು ಜನಿಸಿ ದರು. ಅವರ ತಂದೆ ತುಂಬ ಸ್ಥಿತಿವಂತರು. ಆಗಿನ ಕಾಲಕ್ಕೆ ಸಾವಿರಾರು ರೂಪಾಯಿ ವಾರ್ಷಿಕ ಕಂದಾಯ ಕಟ್ಟುತಿದ್ದವರು.

ಗೋವಿಂದ ಪೈಗಳ ಪ್ರಾಥಮಿಕ ಶಿಕ್ಷಣ ಮಂಗಳೂರಿನಲ್ಲಿಯೇ ಆಯಿತು. ಅವರು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಇಂಟರ್‍ಮೀಡಿಯೆಟ್ಟಿನವರೆಗೆ ಶಿಕ್ಷಣ ಪಡೆದರು. ಖ್ಯಾತ ನವೋದಯ ಸಾಹಿತ್ಯದ ಆಚಾರ್ಯ ಪುರುಷರಾಗಿದ್ದ ಪಂಜೆ ಮಂಗೇಶರಾಯರು ಇವರಿಗೆ ಕನ್ನಡದ ಅಧ್ಯಾಪಕ ರಾಗಿದ್ದ ರು. ಹೆಚ್ಚಿನ ವ್ಯಾಸಂಗಕ್ಕಾಗಿ ಮದರಾಸಿಗೆ ( ಈಗಿನ ಚೆನ್ನೈಗೆ) ತೆರಳಿದರು. ನಂತರ ಪೈಯವರು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜು ಸೇರಿದರು. ಅಲ್ಲಿ ಡಾ.ಎಸ್. ರಾಧಾಕೃಷ್ಣನ್ ಅವರು ಇವರ ಸಹಪಾಠಿಯಾಗಿದ್ದರು.

ಬಿ.ಎ ತರಗತಿ ಕೊನೇ ವರ್ಷದ ಪರೀಕ್ಷೆ ನಡೆದಾಗಲೇ ತಂದೆಯ ಅನಾರೋಗ್ಯದ ಸುದ್ದಿ ತಿಳಿದು,ವ್ಯಾಸಂಗವನ್ನು ಬಿಟ್ಟು ಬಂದರು. ಅವರ ತಂದೆಯ ಮರಣದ ನಂತರ ಪದವಿ ಪಡೆಯುವ ಗೋಜಿಗೆ ಹೋಗಲೇ ಇಲ್ಲ. ಬರೆದಿದ್ದ ಒಂದೇ ಪ್ರಶ್ನೆಪತ್ರಿಕೆ ಇಂಗ್ಲೀಷಿನಲ್ಲಿ ಪ್ರಥಮಸ್ಥಾನ ಪಡೆದು ಬಂಗಾರದ ಪದಕ ಪಡೆದರು.ಆದರೂ ಕೂತಿದ್ದ ಪ್ರಥಮ ಭಾಗ ಇಂಗ್ಲಿಷಿನಲ್ಲಿ ವಿಶ್ವವಿದ್ಯಾನಿಲಯದ ಸುವರ್ಣ ಪದಕ ಅವರಿಗೆ ದೊರೆಯಿತು. ಆದರೆ ಅವರ ಸಾಹಿತ್ಯದ ಅಧ್ಯಯನ ಜೀವನಪರ್ಯಂತ ನಿರಂತರವಾಗಿ ಮುಂದುವರೆಯಿತು.

ಸಾಹಿತ್ಯ

ತಂದೆಯವರ ಮರಣದ ನಂತರ ಹಿರಿಯ ಮಗನಾದ ಇವರ ಮೇಲೆ ಮನೆತನದ ಎಲ್ಲ ಜವಾಬ್ದಾರಿ ಬಿತ್ತು. ಬಿ.ಎ ಪದವಿ ಪೂರ್ಣಗೊಳಿಸಲಿಲ್ಲ. ಮನೆಯಲ್ಲಿಯೇ ಅಮೂಲ್ಯ ಗ್ರಂಥಗಳನ್ನು ತರಿಸಿ ಓದಿದರು. ಕಾಲೇಜಿನಲ್ಲಿದ್ದಾಗ ಲ್ಯಾಟಿನ್ , ಫ್ರೆಂಚ್, ಸಂಸ್ಕ್ಕತ, ಪಾಲಿ, ಬಂಗಾಲಿ, ಭಾಷೆಗಳ ನ್ನು ಅಭ್ಯಸಿಸಿದ್ದರು. ಮನೆಯಲ್ಲಿ ಇನ್ನೂ ಹಲವು ಭಾಷೆಗಳನ್ನು ಅಭ್ಯಸಿಸಿ ಬಹುಭಾಷಾ ಪ್ರವೀಣರಾಗಿದ್ದರು. ಇವರ ಗ್ರಂಥಾಲಯದಲ್ಲಿ ೪೩ ಭಾಷೆಗಳ ಸಾವಿರಾರು ಗ್ರಂಥ ಸಂಗ್ರಹವಿತ್ತು. ಇವರ ಮಾತೃಭಾಷೆ ಕೊಂಕಣಿ, ಪರಿಸರದ ಭಾಷೆ ತುಳು, ರಕ್ತಗತವಾದ ಭಾಷೆ ಕನ್ನಡ. *ಕಲಿತದ್ದು ಇಂಗ್ಲೀಷಿನಲ್ಲಿ. ಮಲೆಯಾಳಿ ಮತ್ತು ತಮಿಳು ಆಜು ಬಾಜು ಭಾಷೆಗಳಾಗಿದ್ದವು. ಮರಾಠಿ ಗುಜರಾತಿ ಜರ್ಮನ್ ಗ್ರೀಕ್ ಮೊದಲಾದವು ಆಸಕ್ತ ಭಾಷೆಗಳಾಗಿದ್ದವು. ಮರಾಠಿ, ಜರ್ಮನ್ ಗ್ರೀಕ್ ಮೊದಲಾದ ಭಾಷೆಗಳನ್ನು ಕಲಿತು ಒಟ್ಟು ೨೫ ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದು ಕೊಂಡಿದ್ದರು. ಗೋವಿಂದ ಪೈಯವರು ನಂತರ ಮಂಜೇಶ್ವರದಲ್ಲಿ ನೆಲಸಿದ್ದರಿಂದ ಮಂಜೇಶ್ವರ ಗೋವಿಂದ ಪೈ ಎಂದೇ ಹೆಸರು ಗಳಿಸಿದರು.

ಗೋವಿಂದ ಪೈಗಳು ‘ಗಿಳಿವಿಂಡು’, ‘ನಂದಾದೀಪ’ ಎಂಬ ಕಾವ್ಯ ಸಂಕಲನಗಳನ್ನು ಹೊರ ತಂದಿದ್ದಾರೆ. ‘ವೈಶಾಖಿ’ ಹಾಗು ‘ಗೊಲ್ಗೊಥಾ’ ಎನ್ನುವ ಎರಡು ಖಂಡಕಾವ್ಯಗಳನ್ನು ಬರೆದಿದ್ದಾರೆ ‘ಹೆಬ್ಬೆರೆಳು’ ಎನ್ನುವ ಪದ್ಯಗಳನ್ನು ಒಳಗೊಂಡ ಏಕಾಂಕ ನಾಟಕವನ್ನೂ, ‘ಚಿತ್ರಭಾನು’ ಎನ್ನುವ ಗದ್ಯನಾಟಕವನ್ನೂ ಬರೆದಿದ್ದಾರೆ. ‘ತಾಯಿ‘, ‘ಕಾಯಾಯ್ ಕೊಮಾಜಿ’ ಎಂಬ ಸಾಮಾಜಿಕ ನಾಟಕಗಳನ್ನು ಬರೆದದ್ದಲ್ಲದೆ, ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಅವರ ‘ಕನ್ನಡದ ಮೊರೆ’ ಎಂಬ ಸಂಕಲನದಲ್ಲಿ ಅವರು ಬರೆದ ಹಲವು ವ್ಯಕ್ತಿ ಚಿತ್ರಗಳು, ಆತ್ಮಕಥನಗಳು ಮತ್ತು ಭಾಷಣಗಳು ಅಡಕವಾಗಿವೆ. ಪ್ರಬಂಧರೂಪದಲ್ಲಿ ಅವರ ‘ಆತ್ಮಕಥನ’ ಮೂಡಿಬಂದಿದೆ. ಲೇಖಕನ ಕಷ್ಟನಿಷ್ಟುರಗಳನ್ನು ವರ್ಣಿಸುವ ‘ಬರಹಗಾರನ ಹಣೆಬರಹ’.
ತಮ್ಮ ಗುರುಗಳಾದ ಪಂಜೆಯವರಲ್ಲಿದ್ದ ಪೂಜ್ಯಭಾವದ ಪ್ರತೀಕದಂತಿರುವ ‘ಕನಸಾದ ನನಸು’, ಒಡನಾಡಿಗಳಾದ ಎಂ.ಎನ್. ಕಾಮತ್, ಕಿಲ್ಲೆ ಅವರ ಸ್ನೇಹದ ಬಗ್ಗೆ ಬರೆದಿರುವ ಅವರ ಬರಹಗಳು, ಎಂ.ಆರ್. ಶ್ರೀನಿವಾಸಮೂರ್ತಿಗಳಿಗೆ ನೆನಪು, ಬೇಂದ್ರೆಯವರಿಗೆ ಐವತ್ತು ದಾಟಿದ್ದಕ್ಕೆ ಸಲ್ಲಿಸಿದ ಹರಕೆ ಇವು ಅವರ ಇನ್ನಿತರ ಪ್ರಬಂಧಗಳಾಗಿವೆ.

ಅವರು ಮೂಲತಃ ಕವಿ. ಇನ್ನೂ ಎಂಟನೆಯ ತರಗತಿಯಲ್ಲಿರುವಾಗಲೇ ಬರೆದ ಮೂರು ಕವನಗಳು ಬಹುಮಾನ ಗಳಿಸಿದ್ದವು, ಮತ್ತು “ಸುವಾಸಿನಿ” ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಅವರ ಸಾಹಿತ್ಯ ಯಾತ್ರೆಯ ಪೂರ್ವಾರ್ಧವು ಬಹಳ ಸಮೃದ್ಧ ಮತ್ತು ಬಹುಮುಖಿ. ಕಾವ್ಯ, ನಾಟಕ, ಅನುವಾದ ವಿಮರ್ಶೆಗಳ ಬೆಳಸು ಬಹು ಹುಲುಸಾಗಿದ್ದವು. ಇನ್ನು ಛಂದಸ್ಸಿನ ವಿಷಯದಲ್ಲೂ ಅವರು ಪ್ರಗತಿಪರರು. ಶತಮಾನದ ಹಿಂದೆಯೇ ಕವನದಲ್ಲಿ ಪ್ರಾಸವನ್ನು ಕೈ ಬಿಟ್ಟಿದ್ದರು.

ಅನುಕೂಲೆಯಾದ ಮಡದಿ ನೆಮ್ಮದಿಯ ಸಂಸಾರ ಮತ್ತು ನಿರಂತರ ಆದಾಯದಿಂದ ಗೃಹಸೌಖ್ಯವಿದ್ದ ಆ ಕಾಲದಲ್ಲಿ ಗಿಳಿವಿಂಡು, ನಂದಾದೀಪ, ಹೃದಯರಂಗ ಕವನ ಸಂಕಲನಗಳು ಹೊರಬಂದವು. ಏಸುವಿನ ಕೊನೆಯ ದಿನಗಳ ಬಗ್ಗೆ ಗೊಲ್ಗೋಥಾ ಬುದ್ಧನ, ಕೃಷ್ಣನ ಹಾಗೂ ಗಾಂಧೀಜಿ ಯವರ ಕೊನೆಯ ದಿನಗಳ ಕುರಿತು ಬರೆದ ವೈಶಾಖಿ, ಪ್ರಭಾಸ ಹಾಗೂ ದೆಹಲಿ ಖಂಡಕಾವ್ಯಗಳು ನಂತರ ಪ್ರಕಟವಾಗಿವೆ.

ವೈಶಾಖಿ, ಪ್ರಾಕೃತದ ಆಳವಾದ ಅಧ್ಯಯನದ ಫಲ ಗೋಲ್ಗೋಥಾ ಖಂಡ ಕಾವ್ಯಕ್ಕೆ ಗ್ರೀಕ್ ಮೂಲ ಸಾಮಗ್ರಿಯ ಅವಲೋಕನ ಕಾರಣ, ಹೆಬ್ಬೆರಳು ಚಿತ್ರಭಾನು ನಾಟಕಗಳು, ಅಲ್ಲದೆ ‘ ನೋ’ ಎಂಬ ಜಪಾನಿ ನಾಟಕಕಾರನ ಎಂಟು ಕೃತಿಗಳ ಅನುವಾದ ಜೊತೆಗೆ ಸಂಶೋಧನೆ ಮತ್ತು ವಿಮರ್ಶೆ ಮೊದಲಾದವು ಬೆಳಕು ಕಂಡವು. ಅವುಗಳಲ್ಲಿ ಸೃಜನಶೀಲ ಕೃತಿಗಳ ಸಂಖ್ಯೆಯೇ ಅಧಿಕ. ಇವರ ಸಾಂಸಾರಿಕ ಜೀವನ ಸುಖದ ಅವಧಿ ಬಹು ಕಡಿಮೆ. ಹುಟ್ಟಿದ ಒಂದು ಹೆಣ್ಣು ಮಗು ಬೇಗನೆ ತೀರಿ ಹೋಯಿತು. 1927 ರಲ್ಲಿ ಇವರ ಹೆಂಡತಿ ಕೃಷ್ಣಾಬಾಯಿ ಮರಣ ಹೊಂದಿದರು. ಆಗ ಪೈಯವರಿಗೆ 44 ವಯಸ್ಸು. ಅವರು ಮರು ಮದುವೆಯಾಗದೆ ವಾನ ಪ್ರಸ್ಥಾಶ್ರಮ ಸ್ವೀಕರಿಸಿದರು. ಅವರ ಜೀವನದಲ್ಲಿ ಅದು ಹೊಸ ತಿರುವು ನೀಡಿತು. ತಮಗಾದ ಅನಾನುಕೂಲವನ್ನು ಅವರು ತಮ್ಮ ಸಾಹಿತ್ಯ ಸೇವೆಗೆ ಪೂರಕವಾಗಿಸಿ ಕೊಂಡರು. ಅವರ ಬಹುತೇಕ ಸಂಶೋಧನ ಕೃತಿಗಳು ಈ ಅವಧಿಯಲ್ಲಿಯೇ ಹೊರ ಬಂದವು. ಕಾಲಮಾನದ ದೃಷ್ಟಿಯಿಂದ ಸೃಜನ, ಅವರ ಪೂರ್ವಾರ್ಧ ಜೀವನದ ಕೃಷಿ, ಸಂಶೋಧನ ಉತ್ತರಾರ್ಧ ಜೀವನದ ಕೃಷಿ.

ನಾಡ ಭಕ್ತಿಗೀತೆಗಳು

ಗೋವಿಂದ ಪೈ ಅವರ ದೇಶಭಕ್ತಿ ತಮ್ಮ ತವರುನಾಡಾದ ತುಳುನಾಡಿನಿಂದ ಮೊದಲ್ಗೊಂಡು, ಕನ್ನಡನಾಡಿನ ಸುತ್ತಲೂ ಬಳ್ಳಿಯಂತೆ ಹಬ್ಬಿ, ಕಡೆಗೆ ಭಾರತಾಂಬೆಯ ಅಡಿದಾವರೆಗಳಲ್ಲಿ ಪುಷ್ಪವಾಗಿ ಸಮರ್ಪಣೆಗೊಂಡಿದೆ. “ಜಯ ಜಯ ತುಳುವ ತಾಯೆ ಮಣಿವೆ, ತಂದೆ ತಾಯಂದಿರ ತಾಯೆ, ಭುವನದಿ ತ್ರಿದಿವಚ್ಛಾಯೆ” ಎಂಬುದು ಅವರ ತುಳುನಾಡಿನ ಕುರಿತ ಮೊದಲ ಸಾಲುಗಳು.

“ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ. ನಮ್ಮ ಜನ್ಮದಾತೆಯೆ” ಎಂಬ ಅವರ ಹಾಡು ನಿರಂತರವಾಗಿ ಕನ್ನಡಿಗರ ತನುಮನ ಗಳಲ್ಲಿ ಮಾರ್ದನಿಸುತ್ತಿದೆ. “ಭಾರತವನಳಿಯುತ್ತ ನನಗೆ ಜೀವನವೆತ್ತ? ಭಾರತವೇ ನನ್ನುಸಿರು, ನನ್ನೊಗೆದ ‘ಬಸಿರು’ ಎಂದು ಭಕ್ತಿಯಿಂದ ನಮಿಸುತ್ತಾ ‘ಭಾರತ ಯಶೋಗಾನವೆನ್ನೆದೆಯ ತಾನ’ “ಭಾರತಾಂಬೆಯ ಭಕ್ತಿ ನನಗಾತ್ಮಶಕ್ತಿ” ಎಂದು ತಾಯಿ ಭಾರತಾಂಬೆಗೆ ಧನ್ಯತೆಯನ್ನು ವ್ಯಕ್ತಪಡಿಸುತ್ತಾರೆ.

ಗೌರವ/ಪುರಸ್ಕಾರ

  • ಕನ್ನಡದ ಪ್ರಥಮ ರಾಷ್ಟ್ರಕವಿ
  • ೧೯೪೯ರಲ್ಲಿ ಮದರಾಸು ಸರಕಾರವು (೧೯೫೬ರಲ್ಲಿ ಕರ್ನಾಟಕ ಏಕೀಕರಣಕ್ಕಿಂತ ಮೊದಲು ದಕ್ಷಿಣ ಕನ್ನಡ ಜಿಲ್ಲೆಯು ಆಗಿನ ಮದರಾಸು ರಾಜ್ಯದಲ್ಲಿ ಅಂದರೆ ಈಗಿನ ತಮಿಳುನಾಡಿನಲ್ಲಿದ್ದಿತು.) ಗೋವಿಂದ ಪೈಗಳಿಗೆ ರಾಷ್ಟ್ರ ಕವಿಎಂದು ಸನ್ಮಾನ ನೀಡಿ ಗೌರವಿಸಿತು.
  • ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ- ೧೯೫೦ರಲ್ಲಿ ಮುಂಬಯಿಯಲ್ಲಿ ಜರುಗಿದ ೩೪ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೋವಿಂದ ಪೈಗಳು ಅಧ್ಯಕ್ಷರಾಗಿದ್ದರು.

ಕೃತಿಗಳು

ಗೊಲ್ಗೋಥಾ ಅಥವಾ ಯೇಸುವಿನ ಕಡೆಯ ದಿನ Golgotha
ವೈಶಾಖಿ ಅಥವಾ ಬುದ್ಧನ ಕೊನೆಯ ದಿನ (ಖಂಡ ಕಾವ್ಯ)
ಹೆಬ್ಬೆರಳು
ಇಂಡಿಯಾನ
ವಿಟಂಕ
ಇಂಗಡಲು (ಆಯ್ದ ಕವನಗಳು)
ಶ್ರೀಕೃಷ್ಣ ಚರಿತ್ರೆ
ಆತ್ಮಕಥೆ:- ಕನ್ನಡದ ಮೊರೆ (ಭಾಷಣಗಳು ಮತ್ತು ಲೇಖನಗಳು)
ತಾಯಿ ಮತ್ತು ನೋ ನಾಟಕಗಳುಕುಮಸಾಕಾ
ಕಾಯೊಮ್ ಕೋಮಾಚಿ
ಸೊತೋಬಾ ಕೊಮಾಚಿ
ಹಾಗೊರೋವೊ
ತ್ಸುನೆಮಾಸ
ಸೊಮಾಗೆಮಂಜಿ
ಚೊರಿಯೊ
ಶೋಜೊ
ಗಿಳಿವಿಂಡು (ಕವನ ಸಂಕಲನ)
ಗೀತಾಂಜಲಿ (ರವೀಂದ್ರನಾಥ ಠಾಗೋರರ ಗೀತಾಂಜಲಿಯ ಕನ್ನಡ ಅನುವಾದ)
ಗೋವಿಂದ ಪೈ ಅವರ ಲೇಖನಗಳು ಮತ್ತು ಪ್ರಬಂಧಗಳು
ಗೋವಿಂದ ಪೈ ಅವರ ಕೆಲವು ಪತ್ರಗಳು
ಚಿತ್ರಭಾನು ಅಥವಾ ೧೯೪೨
ಗೋವಿಂದ ಪೈ ಸಂಶೋಧನಾ ಸಂಪುಟ
ನಂದಾದೀಪ (ಕವನ ಸಂಕಲನ)
ಹೃದಯರಂಗ (ಕವನ ಸಂಕಲನ)

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ