ರಾಯಚೂರು ಜಿಲ್ಲೆ

ಕರ್ನಾಟಕದ ಜಿಲ್ಲೆಗಳು

ಕನ್ನಡ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಹೊತ್ತು ನಿಂತ ಹಲವು ಜಿಲ್ಲೆಗಳಲ್ಲಿ ರಾಯಚೂರು ಜಿಲ್ಲೆಯು ಒಂದು ಹಿಂದಿನ ಕಾಲದಲ್ಲಿ ಎಡದೊರೆನಾಡು ಯಡದೊರೆನಾಡು ಮಿರ್ಚ್ಛಾಸಿರ, ಮಧ್ಯಕಾಲದಲ್ಲಿ ರಾಯಚೂರು ದೋ ಆಬ್ ಎಂಬುವದಾಗಿ ಗುರುತಿಸಲ್ಪಟ್ಟು ಇತಿಹಾಸ ಪುಟಗಳಲ್ಲಿ ರಾರಾಜಿಸಿದ ಚರಿತ್ರೆ ಈ ಜಿಲ್ಲೆಗಿದೆ.

ಕೃಷ್ಣಾ ಮತ್ತು ತುಂಗಭದ್ರ ನದಿಗಳ ನಡುವೆ ಈ ಜಿಲ್ಲೆ ೫ ತಾಲ್ಲೂಕುಗಳನ್ನು ಹೊಂದಿದೆ (ರಾಯಚೂರು, ಲಿಂಗಸುಗೂರು, ಸಿಂಧನೂರು, ಮಾನ್ವಿ ದೇವದುರ್ಗ) ಈ ಜಿಲ್ಲೆಯ ಜನಜೀವನ ಹಾಗೂ ಚರಿತ್ರೆಯನ್ನು ನಿರೂಪಿಸುವಲ್ಲಿ ಪ್ರಾಕೃತಿಕ ಪರಿಸರವೂ ಪ್ರಮುಖವಾದ ಪಾತ್ರವನ್ನು ವಹಿಸಿದೆ. ಇಲ್ಲಿ ಫಲವತ್ತಾದ ಭೂಮಿ  ಮತ್ತು ಖನಿಜ ಸಂಪತ್ತು ರಾಜ ಮಹಾರಾಜರನ್ನು ತನ್ನಡೆಗೆ ಆಕರ್ಷಿಸಿದೆ. ಇಲ್ಲಿಯ ಬೆಟ್ಟಗುಡ್ಡಗಳಲ್ಲಿ ಕೋಟೆಕೊತ್ತಲೆಗಳು ನಿರ್ಮಾಣವಾಗಿವೆ. ಕಲಾಸಂಪತ್ತಿನಿಂದಾಗಿ ನಯನ ಮನೋಹರ ದೇವಾಲಯಗಳು ಮೈದಳೆದಿವೆ.

Products from Amazon.in

ರಾಯಚೂರು ನಗರದ ಇತಿಹಾಸ:

ಈ ನಗರವು ಹಲವಾರು ವರ‍್ಶಗಳ ಇತಿಹಾಸವನ್ನು ಹೊಂದಿದ್ದು, ಸಾಮ್ರಾಟ್ ಅಶೋಕ ಚಕ್ರವರ‍್ತಿಯ ಸಾಮ್ರಾಜ್ಯದ ಗತ ವೈಬವದ ದಿನಗಳ ಕಡೆಗೆ ಕರೆದೊಯ್ಯುತ್ತದೆ. ಕ್ರಿಸ್ತ ಪೂರ‍್ವದ ಮುಂಚೆಯೇ ಈ ನಗರವು ಅಸ್ತಿತ್ವದಲ್ಲಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ರಾಯಚೂರು ನಗರವು ಬಹಮನಿ, ವಿಜಯನಗರ, ಚಾಲುಕ್ಯ, ಮೊಗಲ್ ಹೀಗೆ ವಿವಿದ ಸಾಮ್ರಾಜ್ಯಗಳ ಬಾಗವಾಗಿತ್ತು. ಶಾಸನಗಳ ದ್ರುಶ್ಟಿಯಿಂದಲೂ ಈ ನಗರವು ತುಂಬಾ ಶ್ರೀಮಂತವಾಗಿದ್ದು, ಮೌರ‍್ಯರ ಕಾಲದಿಂದ ಹಿಡಿದು ಕೊನೆಯ ಮುಸ್ಲಿಂ ರಾಜರವರೆಗಿನ ನೂರಾರು ಶಾಸನಗಳು ಇಲ್ಲಿ ಸಿಕ್ಕಿವೆ. ಈ ಶಾಸನಗಳು ಕನ್ನಡ, ತೆಲುಗು, ಅರಾಬಿಕ್, ಪರ‍್ಶಿಯನ್, ಪ್ರಾಕ್ರುತ ನುಡಿಗಳಲ್ಲಿದ್ದು, ಇಲ್ಲಿ ಹಲವಾರು ಶತಮಾನಗಳ ಕಾಲ ಆಳ್ವಿಕೆ ಮಾಡಿದ ರಾಜಮನೆತನಗಳಿಗೆ ಸೇರಿವೆ.

ರಾಯಚೂರು ನಗರದ ಹುಟ್ಟು ಕ್ರಿ.ಪೂ 3ನೇ ಶತಮಾನದಲ್ಲಿಯೇ ಆಗಿದೆ ಎಂದು ಅದರ ಇತಿಹಾಸವು ಸಾರಿ ಹೇಳುತ್ತದೆ. ಇಲ್ಲಿ ಸಿಕ್ಕಿದ ಸಾಮ್ರಾಟ್ ಅಶೋಕ ಚಕ್ರವರ‍್ತಿಯ ಕಾಲದ 3 ಕಲ್ಲಿನ ಶಾಸನಗಳು, ಈ ನಗರವು ಕ್ರಿ.ಪೂ 273 ರಿಂದ 236 ರವರೆಗೆ ಅವನ ಆಳ್ವಿಕೆಯಲ್ಲಿತ್ತು ಎಂದು ಸಾಬೀತು ಪಡಿಸುತ್ತವೆ. ಕ್ರಿಸ್ತ ಪೂರ‍್ವದ ಮುಂಚೆ ಈ ನಗರವು ಶಾತವಾಹನರ ಸಾಮ್ರಾಜ್ಯದ ಬಾಗವಾಗಿತ್ತು ಎಂದು ಊಹಿಸುತ್ತಾರೆ. ಆದರೆ ನಿಕರವಾದ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಕ್ರಿ.ಶ. 3 ಮತ್ತು 4 ನೇ ಶತಮಾನದಲ್ಲಿ ಜಿಲ್ಲೆಯು ಕೆಲವು ವರ‍್ಶಗಳ ಕಾಲ ವಾಕಾಟಕರ ಹಿಡಿತದಲ್ಲಿತ್ತು ಎಂದು ತೋರುತ್ತದೆ. ಅನಂತರ ಇದು ಕದಂಬರ ಆಳ್ವಿಕೆಗೆ ಒಳಗೊಂಡಿತ್ತು ಎಂದು ಕಂಡುಬರುತ್ತದೆ. ರಾಯಚೂರನ್ನು ಆಳಿದ ಮುಂದಿನ ಪ್ರಮುಕ ರಾಜವಂಶವೆಂದರೆ ಬಾದಾಮಿಯ ಚಾಲುಕ್ಯರು. ಐಹೊಳೆಯಲ್ಲಿ ಸಿಕ್ಕಿದ ಶಾಸನದ ಪ್ರಕಾರ ಎರಡನೇ ಪುಲಕೇಶಿಯು ಪಲ್ಲವರನ್ನು ಸೋಲಿಸಿದ ಮೇಲೆ ಈ ಜಿಲ್ಲೆಯನ್ನು ತನ್ನ ಮಗ ಆದಿತ್ಯ ವರ‍್ಮನ ಆಡಳಿತದಲ್ಲಿ ಒಂದು ಪ್ರಾಂತವಾಗಿ ಮಾಡಿಕೊಂಡಿದ್ದನು. ಅನಂತರ ಇಡೀ ರಾಯಚೂರು ಜಿಲ್ಲೆಯು ರಾಶ್ಟ್ರಕೂಟರ ಆಡಳಿತಕ್ಕೆ ಒಳಗೊಂಡಿತ್ತು.

Products from Amazon.in

ಈ ಸಮೃದ್ಧಿಯ ನಾಡನ್ನು ಹೊಂದಲು ಇಲ್ಲಿ ನಡೆದ ಯುದ್ಧಗಳು ಜಿಲ್ಲೆಯ ಬಂಡೆಗಳನ್ನೆಲ್ಲ ರಕ್ತಸಿಕ್ತವಾಗಿ ಮಾಡಿದ್ದವು. ಹಟ್ಟಿಯ ಚಿನ್ನದ ಗಣಿ ಪ್ರದೇಶವನ್ನು ವಶವರ್ತಿಯಾಗಿ ಮಾಡಿಕೊಳ್ಳಲು ವಿಜಯನಗರ ಮತ್ತು ಬಹಮನಿ (ಮುಂದೆ ವಿಜಾಪುರ) ರಾಜ್ಯಗಳ ನಡುವೆ ನಡೆದ ದೋ ಆಬ್ ಯುದ್ಧಗಳಿಂದ ಇತಿಹಾಸದಲ್ಲಿ ಇದು ಪ್ರಸಿದ್ಧವಾಗಿದೆ. ಗಡಿಯ ಎರಡು ನದಿಗಳ ವಿನಾ ಬಹುಪಾಲು ಜಿಲ್ಲೆ ಪುಷ್ಕಳ ಕೆರೆ ನೀರಾವರಿ ಹೊಂದಿತ್ತು. ಏತಗಳನ್ನೂ ಶಾಸನಗಳು ಹೆಸರಿಸಿವೆ.

ರಾಚೂರು ಎಂಬ ಹೆಸರಿನಿಂದ ಶಾಸನಗಳಲ್ಲಿ ಪರಿಚಿತವಾದ ಈ ಊರಿನ ಹೆಸರು ಹೇಗೆ ಬಂತೆಂದು ತಿಳಿಯದು. ಇಲ್ಲಿಯ ಭಾರೀ ಬಂಡೆಗಳ ಕೋಟೆಯನ್ನು ಕಟ್ಟಿದ್ದು ಓರಂಗಲ್ಲಿನ (ಏಕಶಿಲಾನಗರ) ಕಾಕತೀಯ ಅಧಿಕಾರಿ ಗೋನ ಕನ್ನಯ ರೆಡ್ಡಿ (1294). ಈ ಗಿರಿದುರ್ಗವನ್ನು ಭಾರಿ ಗಾತ್ರದ ಬಂಡೆಗಳನ್ನು ಪ್ರಾಣಿಗಳು ಎಳೆದು ಕೋಟೆಕಟ್ಟಲು ಸಾಗಿಸಿದ ಚಿತ್ರಣದ ಒಂದು ಬೃಹತ್ ಶಿಲ್ಪ ರಾಯಚೂರಿನ ಬಸ್ ನಿಲ್ದಾಣದ ಬಳಿಯ ಕೋಟೆಯ ಭಾಗದಲ್ಲಿ ಕಾಣುವುದು. ಆದರೆ ಇದರ ಮೊದಲೇ ಇಲ್ಲಿ ಒಂದು ಕೋಟೆ ಇದ್ದು 12ನೇಯ ಶತಮಾನದಲ್ಲಿ ಹೊಯ್ಸಳ ವಿಷ್ಣುವರ್ಧನ ಇದನ್ನು ಗೆದ್ದನೆಂದು ಹಾಸನ ಜಿಲ್ಲೆಯ ಶಾಸನಗಳು ಹೇಳಿವೆ. ಕಾಕತೀಯವೇ ಅಲ್ಲದೆ ಬಹಮನಿ ಅರಸರು, ಈ ವಿಜಾಪುರದ ಅಧಿಲ್‌ಷಾಹಿಗಳು ಈ ಕೋಟೆಯನ್ನು ವಿಸ್ತರಿಸಿ, ಅಲ್ಲಿ ಅನೇಕ ಮಸೀದಿ, ದರ್ಗಾ, ವಾಸದ ಕಟ್ಟಡಗಳನ್ನು ಕಟ್ಟಿದರು.

ಜಿಲ್ಲೆಯು ಇತಿಹಾಸ ಪೂರ್ವಕಾಲದ ಹಲವು ನಿವೇಶನಗಳನ್ನು ಹೊಂದಿದ್ದು ಅಶೋಕನ ಒಂದು ಶಾಸನ ಮಸ್ಕಿಯಲ್ಲಿ ದೊರತಿದೆ. ಈ ಊರು ಒಂದು ಇತಿಹಾಸ ಪೂರ್ವಕಾಲದ ನಿವೇಶನವೂ ಆಗಿದ್ದು ಶಾಸನಗಳಲ್ಲಿ ಮೊಸಂಗಿ ಎಂದು ಪರಿಚಿತವಾಗಿತ್ತು. ಯಾದವರ ಒಂದು ಶಾಸನದಲ್ಲಿ ಇದನ್ನು ರಾಜಧಾನಿ ಪ್ರಿಯ ಮೊಸಂಗಿ’ ಎಂದಿದೆ. ವಿಜಯನಗರದ ಕಾಲದಲ್ಲಿ ಇದು ಮೊಸಗೆ ಎಂದೂ ಪರಿಚಿತವಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಬಾದಾಮಿ ಚಾಳುಕ್ಯರ ಕಾಲದ ಯಾವುದೇ ಶಾಸನ ದೊರತಿಲ್ಲ. ರಾಷ್ಟ್ರಕೂಟರ ಹಲವು ಶಾಸನಗಳಿವೆ. ಈ ಪೈಕಿ ಅಮೋಘ ವರ್ಷನ ಪುತ್ರ ಮುಮ್ಮಡಿ ಕೃಷ್ಣನ ಶಾಸನ ಸಿಕ್ಕಿದ್ದು ಆತ ಕಲ್ಮಾಲದಲ್ಲಿ (ಕಲ್ಮಲೆ ಎಂದಿದೆ) ಆದಿತ್ಯ ದೇವರಿಗೆ ಭಾಗ ನೀಡಿದ ವಿಚಾರವಿದೆ.

ಕಲ್ಯಾಣ ಚಾಳುಕ್ಯರು ಇಲ್ಲಿ ಅನೇಕ ದಾನಧರ್ಮ ಮಾಡಿದ, ಅಗ್ರಹಾರ ಸ್ಥಾಪಿಸಿದ ಶಾಸನಗಳಿವೆ. ನವಿಲೆ (ನವಲಿ) ಒಂದು ಪುಣ್ಯಕ್ಷೇತ್ರವೆಂದು ಆಗಿನ ಶಾಸನಗಳು ಹೇಳಿವೆ. ಖ್ಯಾತ ಶರಣ ಹಾಗೂ ಶಂಕರ ದಾಸಿಮಯ್ಯ ಇದೇ ಊರವನು. ಬಲ್ಲಟಗಿಯು ಬಲ್ಲ ವಿಟ್ಟಿಗೆಯೆಂದು ಪರಿಚಿತವಾಗಿದ್ದು ಇಲ್ಲಿ ಚಾಳುಕ್ಯ ಜಗದೇಕ ಮಲ್ಲನ ರಾಣಿ ಸೋಮಲದೇವಿ ಬಲ್ಲಟಿಗೆ ಬಂಕೇಶ್ವರ ದೇವರಿಗೆ ದಾನಮಾಡಿದ ಶಾಸನವಿದೆ (1036). ಆಗ ಆಂಧ್ರದ ಪೊಟ್ಟಲ ಕೆರೆ (ಈಗಿನ ಪಟ್ಲಂಚೆರು) ಅದರ ರಾಜಧಾನಿಯಾಗಿತ್ತು. ಕಲ್ಯಾಣವಲ್ಲ. ಇದೇ ವಂಶದ ಸೋಮೇಶ್ವರನ ರಾಣಿ ಚಾಮಲಾದೇವಿ ಇದೇ ಊರಲ್ಲಿ ದಾನ ನೀಡಿದ ಶಾಸನವಿದೆ(1058). ಬಲ್ಲಟಿಗೆ ಆಗ ಒಂದು ಗಣ್ಯ ಊರಾಗಿದ್ದುದು ಸ್ಪಷ್ಟ. ಇದು ಮೊಸಳಿಕಲ್-300 ಎಂಬ ಪ್ರದೇಶಕ್ಕೆ ಒಳಪಟಿತ್ತು. ಮೊಸಳಿಕಲ್ ಎಂಬ ಊರು ಈಗಿನ ಮೊಸರು ಕಲ್ಲಾಗಿದ್ದು ಖ್ಯಾತ ಹರಿದಾಸರಾದ ಗೋಪಾಲದ್ಯಾಸರು ಇದೇ ಊರಿನವರು. ಇವರು ಚೀಕೆಲಪದವಿಯ ವಿಜಯದಾಸರ ಶಿಷ್ಯರು.

Products from Amazon.in

ಮಾನುವೆ (ಈಗಿನ ಮಾಗ್ವಿ) ಕಲ್ಯಾಣ ಚಾಳುಕ್ಯರ ಕಾಲದಿಂದ ಪ್ರಸಿದ್ಧ ಪಟ್ಟಣ. ಇಲ್ಲಿ ಹಳೆಯ ಕೋಟೆಯ ಅವಶೇಷವಿದೆ. ಇಲ್ಲಿ ಹಿಂದೆ ಚಿನ್ನದ ಗಣಿಗಾರಿಕೆ ಇತ್ತು. ಚಾಳುಕ್ಯ ಒಂದನೇಯ ಸೋಮೇಶ್ವರನ ಕಾಲದ ಮಹಾಮಂಡಲೇಶ್ವರ ದೇವರಸನ ಆಳ್ವಿಕೆ ಸೂಚಿಸುವ 1052ರ ಶಾಸನವಿದೆ. ಸೇಪುಣರ (ಯಾದವರನ್ನು) ಬೆನ್ನಟ್ಟಿ ಹೊಯ್ಸಳ ಎರಡನೇ ಬಲ್ಲಾಳ ಮಾನುವೆಯವರೆಗೆ ಬಂದಿದ್ದನೆಂದ 13ನೇಯ ಶತಮಾನದ ಶಾಸನವಿದೆ. ಈಗ ಇದು ತಾಲೂಕು ಕೇಂದ್ರ.
ಮುದುಗಲ್ ಪ್ರಾಚೀನ ಆಕರ್ಷಕ ಗಿರಿ ದುರ್ಗವಾಗಿದ್ದು, ಗ್ರಿಕ್ ಲೇಖಕ ಟಾಲೆಮಿ ಇದನ್ನು ಮೌದುಗಲಾ’ಎಂದು ಕರೆದಿದ್ದನೆಂದು ಹೇಳಿಕೆ ಇದ್ದು, ಇದು 2000 ವರ್ಷಗಳ ಹಿಂದಿನ ನೆಲೆ. ವಿಜಯನಗರ ಮತ್ತು ಬಹಮನಿ ನಂತರ ವಿಜಾಪುರಗಳ ನಡುವೆ ಇಲ್ಲಿ ಹಲವು ಬಾರಿ ಮುಖಾಮುಖಿ ಆಗಿದೆ. ಕನ್ನಡ ಶಾಸನವಿರುವ ಒಂದು ಫಿರಂಗಿ ಕೋಟೆಯಲ್ಲಿ ಇದೆ. ಇಲ್ಲಿನ ಅಕ್ಕಸಾಲಿಗನೊಬ್ಬ ನ ಮಗಳನ್ನು ಮೋಹಿಸಿ ಜಯನಗರದ ದೇವರಾಯನು ಅವಳನ್ನು ವರಿಸಲು ಇಚ್ಛಿಸಿದ. ಬಹಮನಿ ಅರಸರು ಇದಕ್ಕೆ ವಿರೋಧ ಮಾಡಿದಾಗ ಆದ ಯುದ್ಧದಲ್ಲಿ ದೇವರಾಯ ಸೋತ. ಈ ಕಟ್ಟುಕತೆಯನ್ನು ಫರಿಸ್ತಾ ಎಂಬ ಪರ್ಶಿಯನ್ ಇತಿಹಾಸಕಾರ ಹೇಳಿದ್ದಾನೆ. ಊರಲ್ಲಿ 60ಕ್ಕೂ ಮೇಲ್ಪಟ್ಟ ಶಾಸನಗಳಿದ್ದು ಊರಿನ ಐತಿಹಾಸಿಕ ಮಹತ್ವ ತಿಳಿಯುತ್ತದೆ.

ಲಿಂಗಸುಗೂರು ತಾಲೂಕು ಹಟ್ಟಿ ಚಿನ್ನದಗಣಿ ಹೊಂದಿದೆ. ಹಟ್ಟಿ ಒಂದು ಪಟ್ಟಣವೇ ಆಗಿದೆ. ಜಲದುರ್ಗವೆಂಬ ವಿಶಿಷ್ಟ ಕೃಷ್ಣಾ ನದಿಯಿಂದ ಆವೃತವಾದ ಸುಂದರ ಪ್ರವಾಸೀ ತಾಣ. ಐತಿಹಾಸಿಕ ಮಹತ್ವದ ತಾಲೂಕಿನಲ್ಲಿರುವ ಸ್ಥಳ. ಲಿಂಗಸುಗೂರಿನ ಕಲ್ಲೇಶ್ವರ ದೇವಾಲಯದಲ್ಲಿ ಆರನೇಯ ವಿಕ್ರಮಾದಿತ್ಯನ ಶಾಸನವಿದೆ. ಇದು ಒಂದು ಸೇವಾ ಠಾಣ್ಯವಾಗಿದ್ದು, 19ನೇಯ ಶತಮಾನದಲ್ಲಿ ಭಾವಣಿಯೆಂದು ಪರಿಚಿತವಾಗಿತ್ತು.

Products from Amazon.in


ದೇವದುರ್ಗ ತಾಲೂಕು ಕೃಷ್ಣಾ ನದಿಯನ್ನು ಗಡಿಯಾಗಿ ಹೊಂದಿದೆ. ಊರ ಹೆಸರೇ ಹೇಳುವಂತೆ ಇಲ್ಲಿರುವುದು ಒಂದೇ ಕೋಟೆ. ನಿಜಾಮರ ಕಾಲದಲ್ಲಿ ಬೇಡದೊರೆಗಳ ಕೇಂದ್ರವಾಗಿತ್ತು. ಚೆನ್ನಮಲ್ಲಕವಿ ಈ ಊರಿನವನು. ದೇವದುರ್ಗ ತಾಲೂಕಿನಲ್ಲಿರುವ ಗಬ್ಬೂರು (ಶಾಸನಗಳಲ್ಲಿ ಗೋಪುರ ಎಂದಿದೆ) ಒಂದು ಪ್ರಸಿದ್ಧ ಕೇಂದ್ರ ಹಾಗೂ ಯಾತ್ರಾಸ್ಥಳ. ಬಿಚ್ಚಿ ಬಾಚಯ್ಯ ಎಂಬ ಶರಣ ಇದೇ ಊರಿನವನು. ಇಲ್ಲಿ ಕಲ್ಯಾಣದ ಚಾಳುಕ್ಯರ ಅನೇಕ ಶಾಸನಗಳೂ ದೇವಾಲಯಗಳೂ ಇದ್ದು ಅದು ಪ್ರಸಿದ್ಧ ಅಗ್ರಹಾರವಾಗಿತ್ತು. ಅನೇಕ ವೀರಶೈವ ಮಠಗಳೂ ಇವೆ. ಮಲೆಶಂಕರ, ವೆಂಕಟೇಶ್ವರ, ಬಂಗಾರ ಬಸಪ್ಪ ಮುಂತಾದ ದೇವಾಲಯಗಳು ಪ್ರಸಿದ್ಧ. ಬ್ರಹ್ಮ ಜನಾಲಯವೆಂಬ ಬಸದಿ ಇದ್ದ ಉಲ್ಲೇಖ ಶಾಸನದಲ್ಲಿ ಇದೆ. ಗೋಪುರ ಅಗ್ರಹಾರ’ ಅನೇಕ ಧಾರ್ಮಿಕ ಚಟುವಟಿಕೆಯ ಕೇಂದ್ರವಾಗಿತ್ತು. ಇಲ್ಲಿನ 1148ರ ಒಂದು ಶಾಸನ ಶರಣ ಜೇಡರ ದಾಸಿಮಯ್ಯನನ್ನು ಹೆಸರಿಸಿದೆ.

ಸಿಂಧನೂರ ಈ ಭಾಗದಲ್ಲಿ ಆಳುತ್ತಿದ್ದ ಚಾಳುಕ್ಯರ ಮಾಂಡಲಿಕರಾಗಿದ್ದ ಸಿಂಧರಿಂದ ಹೆಸರು ಪಡೆದಿದೆ. ವಾಣಿಜ್ಯ ಕೇಂದ್ರವಾದ ಇಲ್ಲಿ ಔರಂಗಜೇಬನ ಕಾಲದ್ದೆಂದು ಹೇಳಲಾದ ಒಂದು ಮಸೀದಿ ಇದೆ.

ರಾಯಚೂರು ಈಗ ಶಿಕ್ಷಣ ಕೇಂದ್ರವಾಗಿ ಬೆಳೆದಿದೆ. ಪಂಡಿತ ತಾರಾನಾಥರು ಆರಂಭಿಸಿದ ಹಮ್ ದರ್ದ್ ಶಿಕ್ಷಣ ಸಂಸ್ಥೆ (1920) ಈಗ ವಿಶಾಲ ವೃಕ್ಷವಾಗಿದೆ. ತನ್ನ ಅನೇಕ ಪ್ರೇಕ್ಷಣೀಯ ಸ್ಥಳಗಳಿಂದ- ಕೋಟೆ, ಮಸೀದಿ, ದರ್ಗಾ, ಮಠಗಳಿಂದ ಜಿಲ್ಲೆಯು ಒಂದು ಆಕರ್ಷಣೀಯ ಸ್ಥಾನವಾಗಿದೆ. ಅನೇಕ ದಾಸರೂ ಶರಣರೂ ಇಲ್ಲಿ ಬಾಳಿದ್ದರು. ಲಿಂಗಸುಗೂರಿನ ಪ್ರಾಣೇಶದಾಸರು ಅಲ್ಲದೆ ಜಗನ್ನಾಥ ದಾಸರು, ಮೋಹನದಾಸರು ಹರಿಭಕ್ತಿಯ ದಾಸ ಸಾಹಿತ್ಯ ರಚಿಸಿದರು. ಚೀಕಲ ಪರ್ವಿ, ಮಾನ್ವಿ ದಾಸಸಾಹಿತ್ಯದ ತಿರುಳು ಪ್ರದೇಶ. ಮುಕ್ತಾಯಕ್ಕ (ಮೊಸರಕಲ್), ಮುಕ್ಕುಲದರ ಹಂಪಣ್ಣ, ನವಿಲೆಯ ಶಂಕರ ದಾಸಿಮಯ್ಯ ಇವರೆಲ್ಲ ವಚನಕಾರರಲ್ಲಿ ಅಗ್ರಗಣ್ಯರು.

ಶಾಸನಗಳಲ್ಲಿ ಮೊಟಮರಿ (ಈಗಿನ ಮಾಟಮಾರಿ), ಕಲುಮತಿ (ಕಲ್ಮಾಲ), ಮುದ್ಗನೂರು (ಮುದಗುಂದೂರು), ರಾಕುರ್ಪೆ (ರಾಯಕುಂಪಿ) ಹೀಗೆ ಅನೇಕ ಈಗಿನ ಊರುಗಳ ಹಳೆ ಹೆಸರುಗಳಿವೆ. ಹಿಂದೆ ಹಳ್ಳಿಗಳಿದ್ದ ಊರು ಈಗ ಪಟ್ಟಣಗಳಾಗಿ, ಪಟ್ಟಣಗಳು ಹಳ್ಳಿಗಳಾಗಿವೆ.

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ