ನವೆಂಬರ್ 1ರಂದೇ ಏಕೆ ಕನ್ನಡ ರಾಜ್ಯೋತ್ಸವ; ಚೆಲುವ ಕನ್ನಡನಾಡು ಉದಯವಾಗಿದ್ದು ಹೀಗೆ..

ಕನ್ನಡ ಸಂಸ್ಕೃತಿ

ನವೆಂಬರ್‌ 1 ಬಂತೆಂದರೆ ಕರ್ನಾಟಕದ ಬೀದಿ ಬೀದಿಗಳಲ್ಲಿ ಕನ್ನಡ ಬಾವುಟಗಳು ಹಾರಾಡುತ್ತವೆ, ಮೈಕ್‌ಗಳಲ್ಲಿ ಕನ್ನಡದ ಗೀತೆಗಳು ಮೊಳಗುತ್ತವೆ, ನವೆಂಬರ್‌ ತಿಂಗಳಿಡೀ ಇನ್ನಿಲ್ಲದ ಭಾಷಾಭಿಮಾನ ಮೈತುಂಬುತ್ತದೆ. ಪ್ರತಿ ವರ್ಷ ನವೆಂಬರ್‌ 1ರಂದು ರಾಜ್ಯೋತ್ಸವ ಆಚರಿಸುವುದು ರೂಢಿ. ನವೆಂಬರ್‌ 1ರಂದೇ ಕನ್ನಡ ರಾಜ್ಯೋತ್ಸವ ಆಚರಿಸುವುದರ ಹಿಂದೆ ಕರ್ನಾಟಕ ಏಕೀಕರಣದ ಕಥೆಯಿದೆ.

Products from Amazon.in

ಕರ್ನಾಟಕ ಏಕೀಕರಣ ಚಳವಳಿಯು ಭಾರತ ಸ್ವಾತಂತ್ರ್ಯ ಚಳವಳಿಯ ಜತೆಜತೆಗೇ ನಡೆದುಬಂದಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಭಾಷಾವಾರು ಪ್ರಾಂತ್ಯ ವಿಂಗಡಣೆಗೆ ಬ್ರಿಟಿಷ್‌ ಸರಕಾರ ಕೊನೆಗೂ ಮಣಿದಿತ್ತು. ಆದರೆ, ಕರ್ನಾಟಕ ಏಕೀಕರಣ ಸುಲಭವಾಗಿ ಆಗಲಿಲ್ಲ. ಇಂದು ಬೀದರ್‌ನಿಂದ ಚಾಮರಾಜನಗರದವರೆಗೆ, ಕೋಲಾರದಿಂದ ಮಂಗಳೂರಿನವರೆಗೆ ಇರುವ ಕರ್ನಾಟಕ ಭೂ ಪ್ರದೇಶದ ಹಿಂದೆ ಏಕೀಕರಣ ಚಳವಳಿಯಲ್ಲಿ ಪಾಲ್ಗೊಂಡು ನಾಡು ಕಟ್ಟಿದ ಮಹನೀಯರ ಶ್ರಮವಿದೆ.

ಕರ್ನಾಟಕ ಏಕೀಕರಣಗೊಂಡು ಇಂದಿಗೆ 62 ವರ್ಷ. 1956ರ ನವೆಂಬರ್‌ 1ರಂದು ಕರ್ನಾಟಕ ರಾಜ್ಯದ ಉದಯವಾಯಿತು. ಕರ್ನಾಟಕ ರಾಜ್ಯದ ಹುಟ್ಟಿನ ಜತೆಗೆ ಒಟ್ಟು ಆರು ಹೊಸ ರಾಜ್ಯಗಳೂ ನವೆಂಬರ್‌ 1ರಂದೇ ಉದಯಿಸಿದವು. ಮೈಸೂರು, ಬಾಂಬೆ, ಕೇರಳ, ಮಧ್ಯಪ್ರದೇಶ, ರಾಜಸ್ತಾನ, ಪಂಜಾಬ್‌ 1956ರಲ್ಲಿ ಹುಟ್ಟಿದ ಹೊಸ ರಾಜ್ಯಗಳು.

ಸುಮಾರು 20 ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದ ಕರ್ನಾಟಕ ಏಕೀಕರಣಗೊಂಡು ಮೈಸೂರು ರಾಜ್ಯವಾಗಿ ಜನ್ಮ ತಾಳಿದ್ದು 62 ವರ್ಷಗಳ ಹಿಂದೆ. ಆಲೂರು ವೆಂಕಟರಾಯರು, ರಾ.ಹ. ದೇಶಪಾಂಡೆ, ಉತ್ತಂಗಿ ಚೆನ್ನಬಸಪ್ಪ, ರೊದ್ದಂ ಶ್ರೀನಿವಾಸರಾವ್ ಮೊದಲಾದವರು ಅಖಂಡ ಕರ್ನಾಟಕದ ಕನಸು ಕಂಡಿದ್ದರೆ, ಸರ್‌ ವಾಲ್ಟರ್‌ ಎಲಿಯಟ್‌, ಥಾಮಸ್ ಮನ್ರೊ, ರೆಸಲ್, ಫ್ಲೀಟ್ ಸೇರಿದಂತೆ ಹಲವು ಬ್ರಿಟಿಷ್‌ ಅಧಿಕಾರಿಗಳೂ ಕನ್ನಡ ನಾಡು ಕಟ್ಟುವ ಈ ಕೆಲಸದಲ್ಲಿ ಜತೆಯಾಗಿದ್ದರು.

ಪ್ರೇರಣೆಯಾದ ‘ವಂಗಭಂಗ’:

1905ರಲ್ಲಿ ಬ್ರಿಟಿಷ್‌ ಸರಕಾರ ಬಂಗಾಳವನ್ನು ವಿಭಜನೆ ಮಾಡಿದ್ದನ್ನು ವಿರೋಧಿಸಿ ಬಂಗಾಳದಲ್ಲಿ ವಂಗಭಂಗ ಚಳವಳಿ ಆರಂಭವಾಗಿತ್ತು. ಈ ಚಳವಳಿಗೆ ಮಣಿದ ಬ್ರಿಟಿಷ್‌ ಸರಕಾರ 1912ರಲ್ಲಿ ವಿಭಜಿತ ಬಂಗಾಳವನ್ನು ಒಂದುಗೂಡಿಸಿತು. ವಂಗಭಂಗ ಚಳವಳಿ ಕರ್ನಾಟಕ ಏಕೀಕರಣ ಚಳವಳಿಗೆ ಪ್ರೇರಣೆಯಾಯಿತು.

1915ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಏಕೀಕರಣ ಚಳವಳಿಯ ದನಿಗಳಿಗೆ ವೇದಿಕೆಯಾಯಿತು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಏಕೀಕರಣ ಚಳವಳಿಗೆ ಬೆನ್ನೆಲುಬಾಗಿ ನಿಂತಿತ್ತು. 1916ರಲ್ಲಿ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಏಕೀಕರಣ ಚಳವಳಿಗೆ ಸ್ಪಷ್ಟ ರೂಪ ದೊರೆಯಿತು. 1924ರಲ್ಲಿ ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್‌ ಮಹಾ ಅಧಿವೇಶನದಲ್ಲಿ ಕರ್ನಾಟಕ ಏಕೀಕರಣ ಚಳವಳಿಗೆ ಚಾಲನೆ ಸಿಕ್ಕಿತ್ತು.

ಇದಕ್ಕೂ ಮೊದಲೇ ಎ. ರಂಗನಾಥ ಮೊದಲಿಯಾರ್, ಡಾ. ನಾಗನಗೌಡ, ಜೆ. ಎ. ಸಲ್ಡಾನ, ಎ. ಬಿ. ಶೆಟ್ಟಿ ಮೊದಲಾದವರು ಕರ್ನಾಟಕ ಏಕೀಕರಣವನ್ನು ಮದ್ರಾಸ್‌ ಶಾಸನ ಸಭೆಯಲ್ಲಿ ಬೆಂಬಲಿಸಿದ್ದರು. ಆದರೆ, ಸರ್ಕಾರ ಅದನ್ನು ತಿರಸ್ಕರಿಸಿತು. 1919ರಲ್ಲಿ ವಿ. ಎನ್. ಜೋಗ್ ಕರ್ನಾಟಕ ಪ್ರಾಂತ ರಚನೆಗೆ ಕೋರಿ ಮುಂಬೈ ಶಾಸನ ಸಭೆಯಲ್ಲಿ ಪ್ರಸ್ತಾವ ಮಂಡಿಸಿದ್ದರು. ಆದರೆ, ಅದನ್ನೂ ಸರಕಾರ ತಿರಸ್ಕರಿಸಿತು. 1926ರಲ್ಲಿ ಸರ್ ಸಿದ್ದಪ್ಪ ಕಂಬಳಿ ಮತ್ತೆ ಕರ್ನಾಟಕ ಪ್ರಾಂತ ರಚನೆಗೆ ಗೊತ್ತುವಳಿ ಮಂಡಿಸಿದ್ದರು. ಆದರೆ, ಏಕೀಕರಣಕ್ಕೆ ಎಲ್ಲಾ ಕನ್ನಡಿಗರ ಬೆಂಬಲವಿಲ್ಲ ಎಂಬ ಕಾರಣ ಮುಂಡಿಟ್ಟ ಶಾಸನ ಸಭೆ ಆ ಪ್ರಸ್ತಾವವನ್ನೂ ತಿರಸ್ಕರಿಸಿತ್ತು.

1928ರಲ್ಲಿ ಗುದ್ಲೆಪ್ಪ ಹಳ್ಳಿಕೇರಿ ಅವರ ಪರಿಶ್ರಮದ ಫಲವಾಗಿ ಕನ್ನಡ ಮಾತನಾಡುವ ಜನರಿರುವ ಪ್ರದೇಶಗಳನ್ನು ರಾಜ್ಯವಾಗಿ ರಚಿಸುವ ಸಂಬಂಧ ನೆಹರು ಸಮಿತಿ ರಚನೆಯಾಯಿತು. ಇದರ ಬೆನ್ನಲ್ಲೇ ಏಕೀಕರಣ ಚಳವಳಿಗೆ ಸಾಹಿತಿಗಳ ಬೆಂಬಲ ಸಿಕ್ಕಿತ್ತು. ಕುವೆಂಪು, ಬೇಂದ್ರೆ, ಗೋಕಾಕ್‌, ಬೆಟಗೇರಿ ಕೃಷ್ಣಶರ್ಮ, ಗೋವಿಂದ ಪೈ, ಶಿವರಾಮ ಕಾರಂತ, ಕಯ್ಯಾರ ಕಿಞ್ಞಣ್ಣ ರೈ ಮೊದಲಾದ ಸಾಹಿತ್ಯ ದಿಗ್ಗಜರು ಏಕೀಕರಣ ಚಳವಳಿಗೆ ಜೀವ ತುಂಬಿದರು.

Products from Amazon.in

1938ರ ಮೇ ತಿಂಗಳಲ್ಲಿ ಮುಂಬೈ ಶಾಸನ ಸಭೆ ಕರ್ನಾಟಕ ಏಕೀಕರಣ ಗೊತ್ತುವಳಿಯನ್ನು ಅಂಗೀಕರಿಸಿತು. ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿ. ಜಿ. ಖೇರ್, ಸರ್ ಸಿದ್ದಪ್ಪ ಕಂಬಳಿ, ವಿ. ಎನ್. ಜೋಗ್ ಗೊತ್ತುವಳಿಯನ್ನು ಅನುಮೋದಿಸಿದರು. ಆದರೆ, ಆ ಹೊತ್ತಿಗೆ ಎರಡನೇ ಮಹಾಯುದ್ಧ ಪ್ರಾರಂಭವಾಗಿದ್ದರಿಂದ ಆಗ ಭಾಷಾವಾರು ಪ್ರಾಂತ ರಚನೆ ಆಗಲಿಲ್ಲ. ಮುಂದೆ ರಾಜ್ಯಗಳ ಪುನರ್‌ ವಿಂಗಡಣೆಗಾಗಿ ಸರಕಾರ ಹಲವು ಸಮಿತಿಗಳನ್ನು ರಚಿಸಿದರೂ ಅವ್ಯಾವೂ ಪ್ರತ್ಯೇಕ ಕರ್ನಾಟಕ ವಿಚಾರದಲ್ಲಿ ಫಲ ಕೊಡಲಿಲ್ಲ.

1946ರಲ್ಲಿ ಏಕೀಕರಣ ಚಳವಳಿಯ 10ನೇ ಸಮಾವೇಶ ಮುಂಬೈನಲ್ಲಿ ನಡೆಯಿತು. ಈ ಸಮಾವೇಶದಲ್ಲಿ ಭಾಗಿಯಾಗಿದ್ದ ಸರ್ದಾರ್‌ ಪಟೇಲ್‌ ಭಾಷಾವಾರು ಪ್ರಾಂತ್ಯ ರಚನೆಯ ಪರವಾಗಿ ಮಾತನಾಡಿದ್ದರು. ಅದೇ ವರ್ಷ ದಾವಣಗೆರೆಯಲ್ಲಿ ನಡೆದ ಅಖಿಲ ಕರ್ನಾಟಕ ಸಮಾವೇಶದಲ್ಲಿ ಅಂದಿನ ಮುಂಬೈ ಪ್ರಾಂತ್ಯದ ಕಂದಾಯ ಸಚಿವರಾಗಿದ್ದ ಕನ್ನಡಿಗ ಎಂ.ಪಿ. ಪಾಟೀಲ್‌, ಭಾರತಕ್ಕೆ ಸ್ವಾತಂತ್ರ್ಯ ಚಳವಳಿ ಎಷ್ಟು ಅಗತ್ಯವೋ, ಕರ್ನಾಟಕಕ್ಕೆ ಏಕೀಕರಣ ಚಳವಳಿಯೂ ಅಗತ್ಯ ಎಂದಿದ್ದರು.

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಇದರೊಂದಿಗೆ ಪ್ರತ್ಯೇಕ ರಾಜ್ಯದ ಆಸೆಗೆ ಬಲ ಬಂದಂತಾಗಿತ್ತು. ಆದರೆ, ಅಖಂಡ ಕರ್ನಾಟಕ ರಚನೆಗೆ ಹಳೇ ಮೈಸೂರು ಭಾಗದ ಹಲವು ರಾಜಕಾರಣಿಗಳು ತಕರಾರು ತೆಗೆದಿದ್ದರು. ಮೈಸೂರು ರಾಜ್ಯ ಸಮೃದ್ಧವಾಗಿದ್ದು ಅಭಿವೃದ್ಧಿ ಹೊಂದಿಗೆ, ಆದರೆ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗ ಹಿಂದುಳಿದಿದೆ ಎಂಬ ಕಾರಣಕ್ಕೆ ಮೈಸೂರು ಭಾಗದ ಜನಪ್ರತಿನಿಧಿಗಳು ಅಖಂಡ ಕರ್ನಾಟಕ ರಚನೆಯನ್ನು ವಿರೋಧಿಸಿದ್ದು ವೈರುಧ್ಯ.

ಹಲವು ಹೋರಾಟ ಹಾಗೂ ಅಡೆತಡೆಗಳ ನಡುವೆ ‘ರಾಜ್ಯಗಳ ಪುನರ್‌ವಿಂಗಡಣೆ ಕಾಯ್ದೆ-1956’ರ ಮೂಲಕ ಕರ್ನಾಟಕ ‘ಮೈಸೂರು’ ಎಂಬ ಹೆಸರಿನೊಂದಿಗೆ ಪ್ರತ್ಯೇಕ ರಾಜ್ಯವಾಯಿತು. 1973ರ ನವೆಂಬರ್‌ 1ರಂದು ದೇವರಾಜು ಅರಸು ಸರಕಾರ ಮೈಸೂರು ರಾಜ್ಯದ ಹೆಸರನ್ನು ‘ಕರ್ನಾಟಕ’ ಎಂದು ಮರು ನಾಮಕರಣ ಮಾಡಿತು. ಚೆಲುವ ಕನ್ನಡ ನಾಡು ಉದಯವಾಗಿದ್ದು ಹೀಗೆ.

 

source :samachara.com

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ