ಡಾ| ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ

ಸಾಹಿತಿಗಳು

ಕನ್ನಡಕ್ಕೆ ಆರನೆಯ ಜ್ಞಾನಪೀಠ ಪ್ರಶಸ್ತಿ ೧೯೯೪ರಲ್ಲಿ ಬಂದಾಗ ಕನ್ನಡ ಸಾಹಿತ್ಯ ಲೋಕ ಮತ್ತೊಮ್ಮೆ ಇಡೀ ದೇಶದ ಗಮನ ಸೆಳೆಯಿತು. ಈ ಗೌರವ ಪಡೆದವರು ಡಾ| ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ.

ಎಲ್ಲರಿಗೂ ಅವರವರ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಅತ್ಯಗತ್ಯ ಎಂದು ಬಲವಾಗಿ ಪ್ರತಿಪಾದಿಸುವ ಅನಂತಮೂರ್ತಿ; ವಿದೇಶಗಳ ಹಲವಾರು ಭಾಷೆ ತಿಳಿದಿರುವ ನಮಗೆ ನಮ್ಮ ಅಕ್ಕಪಕ್ಕದ ನಾಡಿನ ಭಾಷೆಗಳು ಗೊತ್ತೇ ಇಲ್ಲದ್ದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಜಗತ್ತಿನ ಬೇರೆ ಬೇರೆ ಭಾಷೆಗಳ ಹಲವು ಮಹತ್ವದ ಕೃತಿಗಳು ಇಂಗ್ಲೀಷಿಗೆ ಸಮರ್ಥವಾಗಿ ಅನುವಾದಗೊಳ್ಳಲು ಸಾಧ್ಯವಿಲ್ಲ ಎನ್ನುವುದ ಅವರ ಅಭಿಪ್ರಾಯವಾಗಿದೆ. ಕನ್ನಡ ಸಾಹಿತಿಯೂ ಮತ್ತು ಭಾರತೀಯ ಸಾಹಿತ್ಯದ ವಿಮರ್ಶಕರೂ ಆದ ಅನಂತಮೂರ್ತಿ ತಮ್ಮನ್ನು ಕನ್ನಡ ಸಂಸ್ಕೃತಿಯ Critical Insider ಎಂದು ಕರೆದುಕೊಳ್ಳುತ್ತಾರೆ.

ತಮ್ಮ ಬಹುಚರ್ಚಿತ ಸಂಸ್ಕಾರ ಕಾದಂಬರಿಯಿಂದ ಭಾರತೀಯ ಸಾಹಿತ್ಯ ಮತ್ತು ಚಲನಚಿತ್ರ ರಂಗಗಳಲ್ಲಿ ಒಂದು ದೊಡ್ಡ ವಿವಾದವನ್ನೇ ಮಾಡಿದ ಅನಂತಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಹಳ್ಳಿಯಲ್ಲಿ. ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತ (ಕುವೆಂಪು ಮತ್ತು ಅನಂತಮೂರ್ತಿ) ರನ್ನು ನೀಡಿದ ಹೆಗ್ಗಳಿಕೆ ತೀರ್ಥಹಳ್ಳಿ ತಾಲ್ಲೂಕಿನದು. ಇವರು ಹುಟ್ಟಿದ್ದು ೧೯೩೨ರ ಡಿಸೆಂಬರ್ ೨೧ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ. ತಾಯಿ ಸತ್ಯಮ್ಮ (ಸತ್ಯಭಾಮ).

ವಿದ್ಯಾಭ್ಯಾಸ:

ದೂರ್ವಾಸಪುರದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್‍ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ೧೯೬೬ರಲ್ಲಿ ಪಿಎಚ್.ಡಿ. ಪಡೆದರು.

ವೃತ್ತಿ ಜೀವನ:

 ೧೯೭೦ರಿಂದ ಮೈಸೂರು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅನಂತಮೂರ್ತಿಯವರು, ೧೯೮೭ರಲ್ಲಿ ಕೇರಳದ ಕೋಟ್ಟಯಂನ ಮಹಾತ್ಮಾಗಾಂಧಿ ವಿಶ್ವವಿದ್ಯಾಲಯದ ಉಪಕುಲಗತಿಗಳಾಗಿದ್ದರು. ೧೯೯೨-೯೩ರ ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯದ ಅಧ್ಯಕ್ಷರಾಗಿದ್ದರು. ೧೯೯೩ರಲ್ಲಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಗೋಕಾಕರ ಅನಂತರ ಈ ಸಂಸ್ಥೆಯ ಅಧ್ಯಕ್ಷರಾದ ಎರಡನೆಯ ಕನ್ನಡಿಗರು ಇವರು.

ಅನಂತಮೂರ್ತಿಯವರು ದೇಶವಿದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಜವಾಹರಲಾಲ್ ನೆಹರೂ ವಿ.ವಿ., ಜರ್ಮನಿಯ ತೂಬಿಂಗೆನ್ ವಿ.ವಿ., ಅಮೇರಿಕ ದೇಶದ ಐಯೊವಾ ವಿ.ವಿ., ಟಫಟ್ಸ್ ವಿ.ವಿ., ಕೊಲ್ಲಾಪುರದ ಶಿವಾಜಿ ವಿ.ವಿ.ಗಳಲ್ಲಿ ಪ್ರಾಧ್ಯಾಪಕರಾಗಿದ್ದರು.

ಬರಹಗಾರರಾಗಿ, ಭಾಷಣಕಾರರಾಗಿ ಅನಂತಮೂರ್ತಿಯವರು ದೇಶದ ಒಳಗೆ ಮತ್ತು ಹೊರಗೆ ಹಲವಾರು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ; ಉಪನ್ಯಾಸ ನೀಡಿದ್ದಾರೆ. ೧೯೮೦ರಲ್ಲಿ ಸೋವಿಯತ್ ರಷ್ಯಾ, ಹಂಗೇರಿ, ಪಶ್ಚಿಮ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಗೆ ಭೇಟಿ ನೀಡಿದ ಭಾರತೀಯ ಲೇಖಕರ ಬಳಗದ ಸದಸ್ಯರಾಗಿದ್ದರು. ಮಾರ್ಕ್ಸ್‌ವಾದದಿಂದ ತುಂಬ ಪ್ರಭಾವಿತರಾಗಿದ್ದ ಇವರು ತಮ್ಮ ಹಲವಾರು ಅಭಿಪ್ರಾಯಗಳನ್ನು ಪರೀಕ್ಷಿಸಿ ನೋಡಲು ಈ ಭೇಟಿ ನೆರವಾಯಿತು. ಸೋವಿಯತ್ ಪತ್ರಿಕೆಯೊಂದರ ಸಲಹಾ ಸಮಿತಿಯ ಸದಸ್ಯರಾಗಿ ೧೯೮೯ರಲ್ಲಿ ಮಾಸ್ಕೋಗೆ ಭೇಟಿ ನೀಡಿದರು. ೧೯೯೩ರಲ್ಲಿ ಚೀನಾ ದೇಶಕ್ಕೆ ಭೇಟಿ ನೀಡಿದ ಭಾರತೀಯ ಬರಹಗಾರರ ಬಳಗಕ್ಕೆ ಇವರು ನಾಯಕರಾಗಿದ್ದರು. ಇವಲ್ಲದೆ ದೇಶವಿದೇಶಗಳ ಹಲವಾರು ವೇದಿಕೆಗಳಿಂದ ನೂರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ.

ಇಷ್ಟೇ ಅಲ್ಲದೆ, ಅನಂತಮೂರ್ತಿಯವರು ಕನ್ನಡದ ಹಲವಾರು ಸಾಹಿತ್ಯ ದಿಗ್ಗಜರನ್ನು ರೇಡಿಯೋ ಮತ್ತು ದೂರದರ್ಶನಗಳಲ್ಲಿ ಸಂದರ್ಶಿಸಿದ್ದಾರೆ. ಮೈಸೂರು ಆಕಾಶವಾಣಿಗಾಗಿ ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಆರ್.ಕೆ. ನಾರಾಯಣ್, ಆರ್.ಕೆ.ಲಕ್ಷ್ಮಣ್ ಮತ್ತು ಜನರಲ್ ಕಾರಿಯಪ್ಪ ಅವರನ್ನು ಸಂದರ್ಶಿಸಿದ್ದಾರೆ. ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರುಗಳನ್ನು ಕುರಿತು ದೂರದರ್ಶನವು ನಿರ್ಮಿಸಿದ ಸಾಕ್ಷ್ಯ ಚಿತ್ರಗಳಲ್ಲಿ ಸಂದರ್ಶಕರಾಗಿ ಭಾಗವಹಿಸಿದ್ದಾರೆ.

ಸಾಹಿತ್ಯ: 

ಅನಂತಮೂರ್ತಿಯವರು ಪ್ರಸಿದ್ಧರಾಗಿರುವುದು ಕನ್ನಡದ ಬರಹಗಾರರಾಗಿ ಮತ್ತು ಕನ್ನಡ ಸಂಸ್ಕೃತಿಯ critical insider ಆಗಿ. ೧೯೫೫ರಲ್ಲಿ “ಎಂದೆಂದೂ ಮುಗಿಯದ ಕತೆ” ಕಥಾ ಸಂಕಲನದಿಂದ ಅವರ ಸಾಹಿತ್ಯ ಕೃಷಿ ಆರಂಭವಾಯಿತು. ಮೌನಿ, ಪ್ರಶ್ನೆ, ಆಕಾಶ ಮತ್ತು ಬೆಕ್ಕು -ಇವರ ಕಥಾಸಂಕಲನಗಳು. ಈ ಎಲ್ಲ ಕತೆಗಳನ್ನೂ ಒಳಗೊಂಡ “ಮೂರು ದಶಕದ ಕಥೆಗಳು” ೧೯೮೯ರಲ್ಲಿ ಹೊರಬಂದಿದೆ. ಹಿರಿಯ ಸಮಾಜವಾದಿ ರಾಜಕಾರಣಿ ಜೆ. ಎಚ್. ಪಟೇಲರ ಸಮೀಪವರ್ತಿಯಾಗಿದ್ದ ಅನಂತಮೂರ್ತಿ ಅವರು ಶಾಂತವೇರಿ ಗೋಪಾಲ ಗೌಡ ಮತ್ತು ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದವರು. ಇವರ ಬರಹದಲ್ಲಿ ಈ ಇಬ್ಬರ ಪ್ರಭಾವಗಳು ಎದ್ದು ಕಾಣುತ್ತವೆ.

೧೯೬೫ರಲ್ಲಿ ಇವರ ಮೊದಲ ಕಾದಂಬರಿ “ಸಂಸ್ಕಾರ” ಪ್ರಕಟವಾಯಿತು. ಪ್ರಕಟವಾದಾಗ ಮತ್ತು ಚಲನಚಿತ್ರವಾದಾಗ ತುಂಬ ವಿವಾದವನ್ನುಂಟು ಮಾಡಿದ ಈ ಕಾದಂಬರಿ ಹಲವಾರು ದೇಶೀಯ ಮತ್ತು ವಿದೇಶೀಯ ಭಾಷೆಗಳಿಗೆ ಅನುವಾದಗೊಂಡಿದೆ. ಭಾರತೀಪುರ, ಅವಸ್ಥೆ ಮತ್ತು ಭವ -ಇವರ ಇತರ ಕಾದಂಬರಿಗಳು. “ಆವಾಹನೆ” ಎಂಬ ಒಂದು ನಾಟಕವನ್ನು ಬರೆದಿರುವ ಅನಂತಮೂರ್ತಿ “೧೫ ಪದ್ಯಗಳು”, “ಮಿಥುನ” ಮತ್ತು “ಅಜ್ಜನ ಹೆಗಲ ಸುಕ್ಕುಗಳು” ಎಂಬ ಮೂರು ಕವನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಪ್ರಜ್ಞೆ ಮತ್ತು ಪರಿಸರ, ಪೂರ್ವಾಪರ, ಸಮಕ್ಷಮ -ಇವು ಅವರ ಪ್ರಬಂಧ ಸಂಕಲನಗಳು. ಇಷ್ಟಲ್ಲದೆ ಇಂಗ್ಲೀಷಿನಲ್ಲಿ ಇವರು ಬರೆದಿರುವ ಹಲವಾರು ಪ್ರಬಂಧಗಳು ದೇಶ-ವಿದೇಶಗಳ ಸಾಹಿತ್ಯಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ೧೯೮೧ರಲ್ಲಿ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಷಯಗಳಿಗೆಂದು “ರುಜುವಾತು” ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದರು.

ಅನಂತಮೂರ್ತಿಯವರ ಹಲವು ಕತೆಗಳು ಕನ್ನಡ ಸಾಹಿತ್ಯ ವಿಮರ್ಶಕರ ಗಮನ ಸೆಳೆದಿವೆ ಮತ್ತು ಚರ್ಚೆಗೂ ವಿವಾದಕ್ಕೂ ಒಳಗಾಗಿವೆ. ಸೂರ್ಯ ಕುದುರೆ, ನವಿಲುಗಳು, ಬರ, ಘಟಶ್ರಾದ್ಧ, ತಾಯಿ, ಹುಲಿಯ ಹೆಂಗರಳು ಈ ಸಾಲಿಗೆ ಸೇರುತ್ತವೆ.

ಅನಂತಮೂರ್ತಿಯವರ ಸಂಸ್ಕಾರ, ಅವಸ್ಥೆ ಕಾದಂಬರಿಗಳನ್ನು ಮತ್ತು ಬರ, ಘಟಶ್ರಾದ್ಧ ಕತೆಗಳನ್ನು ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿವೆ. ಇವೆಲ್ಲವೂ ಮಹತ್ವದ ಚಿತ್ರಗಳಾಗಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಘಟಶ್ರಾದ್ಧ ಕತೆಯನ್ನು ಆಧರಿಸಿ “ದೀಕ್ಷಾ” ಎಂಬ ಹಿಂದಿ ಚಲನಚಿತ್ರವೂ ತಯಾರಾಗಿದೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು ಭಾರತ ಸರಕಾರದಿಂದ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ.

ಪ್ರಶಸ್ತಿಗಳು:

ಸಂಸ್ಕಾರ, ಘಟಶ್ರಾದ್ಧ ಮತ್ತು ಬರ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಅನಂತಮೂರ್ತಿಯವರಿಗೆ ಪ್ರಶಸ್ತಿ ಸಿಕ್ಕಿದೆ. ೧೯೮೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೪ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,೧೯೯೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೯೪ರಲ್ಲಿ ಮಾಸ್ತಿ ಪ್ರಶಸ್ತಿ -ಇವು ಅನಂತಮೂರ್ತಿಯವರಿಗೆ ಬಂದ ಮನ್ನಣೆಗಳಲ್ಲಿ ಕೆಲವು. ೧೯೯೪ರಲ್ಲಿ ಬಂದಿರುವ ಜ್ಞಾನಪೀಠ ಪ್ರಶಸ್ತಿ ಇವೆಲ್ಲವುಗಳಿಗೆ ಕಳಶಪ್ರಾಯವಾದುದು.

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ