ಜಶ್ತ್ವಸಂಧಿ

ಕನ್ನಡ ವ್ಯಾಕರಣ

‘ಜಶ್’ ಎಂದರೆ ಸಂಸ್ಕೃತ ವ್ಯಾಕರಣದಲ್ಲಿ ಜಬಗಡದ ಈ ಐದು ವ್ಯಂಜನಗಳನ್ನು ತಿಳಿಸುವ ಒಂದು ಸಂಜ್ಞೆ. ‘ಜಶ್ತ್ವ’ ಎಂದರೆ ಈ ಐದು ವರ್ಣಗಳಾದ ಜಬಗಡದ ವ್ಯಂಜನಗಳು
ಆದೇಶವಾಗಿ ಬರುವುದು ಎಂದು ಅರ್ಥ. ಯಾವ ಅಕ್ಷರಕ್ಕೆ ಇವು ಆದೇಶವಾಗಿ ಬರುತ್ತವೆ? ಎಂಬ ಬಗೆಗೆ ತಿಳಿಯೋಣ.

(1) ದಿಗಂತದಲ್ಲಿ ಪಸರಿಸಿತು.
(2) ಅಜಂತ ಎಂದರೆ ಸ್ವರಾಂತ ಎಂದು ಸಂಜ್ಞೆ.
(3) ಆ ಹುಡುಗನ ಹೆಸರು ಸದಾನಂದ ಎಂದು.
(4) ಅಬ್ಧಿ ಎಂದರೆ ಸಾಗರಕ್ಕೆ ಹೆಸರು.

ಈ ವಾಕ್ಯಗಳಲ್ಲಿ ಬಂದಿರುವ ‘ದಿಗಂತ’, ‘ಅಜಂತ’, ಷಡಾನನ’, ‘ಸದಾನಂದ’, ‘ಅಬ್ಧಿ’ ಈ ಶಬ್ದಗಳನ್ನು ಬಿಡಿಸಿ ಬರೆದರೆ__

ದಿಕ್ + ಅಂತ = ದಿಗ್ + ಅಂತ = ದಿಗಂತ (ಪೂರ್ವದ ಕಕಾರಕ್ಕೆ ಗಕಾರಾದೇಶ)
(ಕ್ + ಅ = ಗ್‍ಅ)
ಅಚ್ + ಅಂತ = ಅಜ್ + ಅಂತ = ಅಜಂತ (ಚಕಾರಕ್ಕೆ ಜಕಾರಾದೇಶ)
(ಚ್ + ಅ = ಜ್‍ಅ)
ಷಟ್ + ಆನನ = ಷಡ್ + ಆನನ = ಷಡಾನನ (ಟಕಾರಕ್ಕೆ ಡಕಾರಾದೇಶ)
(ಟ್ + ಅ = ಡ್‍ಅ)
ಸತ್ + ಆನಂದ = ಸದ್ + ಆನಂದ = ಸದಾನಂದ (ತಕಾರಕ್ಕೆ ದಕಾರಾದೇಶ)
(ತ್ + ಆ = ದ್‍ಆ)
ಅಪ್ + ಧಿ = ಅಬ್ + ಧಿ = ಅಬ್ಧಿ (ಪಕಾರಕ್ಕೆ ಬಕಾರಾದೇಶ)
(ಪ್ + ಧಿ = ಬ್‍ಧಿ)

ಮೇಲಿನ ಈ ಐದೂ ಉದಾಹರಣೆಗಳನ್ನು ಲಕ್ಷ್ಯವಿಟ್ಟು ನೋಡಿದಾಗ, ಪೂರ್ವಶಬ್ದದ ಅಂತ್ಯದಲ್ಲಿರುವ ಕ್, ಚ್, ಟ್, ತ್, ಪ್ ಗಳಿಗೆ ಕ್ರಮವಾಗಿ ಗ್, ಜ್, ಡ್, ದ್, ಬ್ ಗಳು
ಆದೇಶಗಳಾಗಿ ಬಂದಿವೆ. ಈ ಪೂರ್ವ ಶಬ್ದದಲ್ಲಿರುವ ವರ್ಗಪ್ರಥಮವರ್ಣಗಳಿಗೆ ಅದೇ ವರ್ಗದ ಮೂರನೆಯ ವರ್ಣಗಳು ಆದೇಶಗಳಾಗಿ ಬರುವ ಸಂಧಿಯು ಸಂಸ್ಕೃತ ಶಬ್ದಗಳೇ
ಎರಡೂ ಆಗಿದ್ದಾಗ ಮಾತ್ರ ಬರುವುದು. ಕನ್ನಡದಲ್ಲೂ ‘ಕತಪ’ ಗಳಿಗೆ ‘ಗದಬ’ ಗಳು ಆದೇಶವಾಗಿ ಬರುವುದುಂಟು. ಆದರೆ ‘ಕತಪ’ ಗಳು ಉತ್ತರಪದದ ಆದಿಯಲ್ಲಿರಬೇಕು. ಇದು
ಕೇವಲ ಕನ್ನಡದ ಆದೇಶಸಂಧಿಯಂದು ತಿಳಿಯಬೇಕು. ಹೀಗೆ ಪೂರ್ವ ಶಬ್ದದ ಕೊನೆಯ ಕಚಟತಪ ಗಳಿಗೆ ಗಜಡದಬ ಗಳು ಆದೇಶವಾಗಿ ಬರುವುದೇ ಜಶ್ತ್ವಸಂಧಿ0iÉುನಿಸುವುದು.
ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

ಪೂರ್ವಶಬ್ದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ (ಎದುರಿಗೆ ಬಂದರೂ) ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶಗಳಾಗಿ ಬರುತ್ತವೆ. ಇದಕ್ಕೆ ಜಶ್ತ್ವಸಂಧಿಯನ್ನುವರು. ಪ್ರಾಯಶಃ ಎಂದು ಹೇಳಿರುವುದರಿಂದ ಕಖ, ಚಛ, ಟಠ, ತಥ, ಪಫ, ಸ, ಷ, ಙ, ಞ,ಣ, ನ, ಮ ಅಕ್ಷರಗಳು ಪರವಾದರೆ (ಎದುರಿಗೆ ಬಂದರೆ) ಮೂರನೆಯ ಅಕ್ಷರಗಳು ಆದೇಶವಾಗಿ ಕೆಲವು ಕಡೆ ಬರುವುದಿಲ್ಲ. ಅಂದರೆ ಜಶ್ತ್ವಸಂಧಿಯಾಗುವುದಿಲ್ಲ.

ಉದಾಹರಣೆಗೆ:-
ವಾಕ್ + ದೇವಿ = ವಾಗ್‍ದೇವಿ = ವಾಗ್ದೇವಿ          (ಕಕಾರಕ್ಕೆ ಗಕಾರಾದೇಶ)
ವಾಕ್ + ದಾನ = ವಾಗ್‍ದಾನ = ವಾಗ್ದಾ            (            ”                    )
ವಾಕ್ + ಅಧಿಪ = ವಾಗ್‍ಅಧಿಪ = ವಾಗಧಿಪ      (            ”                    )
ದಿಕ್ + ದೇಶ = ದಿಗ್‍ದೇಶ = ದಿಗ್ದೇಶ                 (            ”                    )
ದಿಕ್ + ದಿಗಂತ = ದಿಗ್‍ದಿಗಂತ = ದಿಗ್ದಿಗಂತ       (            ”                    )
ದಿಕ್ + ದೇವತೆ = ದಿಗ್‍ದೇವತೆ = ದಿಗ್ದೇವತೆ      (            ”                    )
ಅಚ್ + ಅಂತ = ಅಜ್‍ಅಂತ = ಅಜಂತ             (ಚಕಾರಕ್ಕೆ ಜಕಾರಾದೇಶ)
ಅಚ್ + ಆದಿ = ಅಜ್‍ಆದಿ = ಅಜಾದಿ                  (            ”                    )
ಷಟ್ + ಆನನ = ಷಡ್‍ಆನನ = ಷಡಾನನ         (ಟಕಾರಕ್ಕೆ ಡಕಾರಾದೇಶ)
ಷಟ್ + ಅಂಗ = ಷಡ್‍ಅಂಗ = ಷಡಂಗ              (            ”                    )
ಷಟ್ + ಅಂಗನೆ = ಷಡ್‍ಅಂಗನೆ = ಷಡಂಗನೆ     (            ”                    )
ವಿರಾಟ್ + ರೂಪ = ವಿರಾಡ್‍ರೂಪ = ವಿರಾಡ್ರೂಪ (            ”                    )
ಸತ್ + ಉದ್ದೇಶ = ಸದ್‍ಉದ್ದೇಶ = ಸದುದ್ದೇಶ    (ತಕಾರಕ್ಕೆ ದಕಾರಾದೇಶ)
ಸತ್ + ಉತ್ತರ = ಸದ್‍ಉತ್ತರ = ಸದುತ್ತರ        (            ”                    )
ಚಿತ್ + ಆನಂದ = ಚಿದ್‍ಆನಂದ = ಚಿದಾನಂದ    (            ”                    )
ಸತ್ + ಭಾವ = ಸದ್‍ಭಾವ = ಸದ್ಭಾವ              (            ”                    )
ಸತ್ + ಉದ್ಯೋಗ = ಸದ್‍ಉದ್ಯೋಗ = ಸದುದ್ಯೋಗ (            ”                    )

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ